ನವದೆಹಲಿ:ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 8 ರಂದು ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪುತ್ರ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದೆ. ಕಾಂಗ್ರೆಸ್ ಪಕ್ಷದ ಸಂಸದ ಅಭಿಷೇಕ್ ಮನು ಸಿಂಘ್ವಿ ಸುದ್ದಿಗೋಷ್ಠಿ ನಡೆಸಿ ಇದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸೋನಿಯಾ ಗಾಂಧಿ ಹೇಳಿದ ದಿನಾಂಕದಂದು ಅಗತ್ಯವಿದ್ದಲ್ಲಿ ಹಾಜರಾಗುತ್ತಾರೆ. ಆದರೆ, ಪಕ್ಷವು ತನಿಖಾ ಸಂಸ್ಥೆಗೆ ಪತ್ರ ಬರೆದು ರಾಹುಲ್ ಗಾಂಧಿಗೆ ಕಾಲಾವಕಾಶ ನೀಡುವಂತೆ ಕೋರಲಾಗುವುದು ಎಂದು ಅವರು ತಿಳಿಸಿದ್ದಾರೆ. 2015ರಲ್ಲಿ ತನಿಖಾ ಸಂಸ್ಥೆಯಿಂದ ಮುಕ್ತಾಯವಾಗಿದ್ದ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇದೀಗ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ಇದನ್ನೂ ಓದಿ:'ನಾನೋರ್ವ ಪಾಕಿಸ್ತಾನಿಯಾಗಿ ಹೇಳುತ್ತಿದ್ದೇನೆ, ವಿರಾಟ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ': ಶೋಯೆಬ್ ಅಖ್ತರ್
ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಹಾಗೂ ವಕ್ತಾರ ರಣದೀಪ್ ಸುರ್ಜೇವಾಲಾ ಮಾತನಾಡಿದ್ದು, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಆರಂಭವಾಗಿದ್ದು 1942ರಲ್ಲಿ. ಬ್ರಿಟಿಷರು ಪತ್ರಿಕೆಯನ್ನು ಹತ್ತಿಕ್ಕಲು ಪ್ರಯತ್ನ ಮಾಡಿದರು. ಇಂದು ಮೋದಿ ಸರ್ಕಾರವೂ ಅದನ್ನೇ ಮಾಡುತ್ತಿದೆ. ಇದೇ ಕಾರಣಕ್ಕಾಗಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ನೋಟಿಸ್ ನೀಡಿದೆ ಎಂದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರಿಗೂ ಸಮನ್ಸ್ ಜಾರಿ ಮಾಡಲಾಗಿತ್ತು. 2012ರಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಭಾರತೀಯ ಜನತಾ ಪಕ್ಷದ ನಾಯಕ ಸುಬ್ರಮಣ್ಯನ್ ಸ್ವಾಮಿ ದೂರು ದಾಖಲಿಸಿದ್ದರು.