ನವದೆಹಲಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಬೆಳವಣಿಗೆ ಕಾಣುವುದಿಲ್ಲ. ಕೇಂದ್ರದಲ್ಲಿ ಯುಪಿಎ ಸರ್ಕಾರ ರಚನೆಯಾದಾಗ ವೇಳೆಯಲ್ಲಿ ಸೋನಿಯಾ ಗಾಂಧಿ ಅವರು ಪ್ರಧಾನಿಯಾಗಬೇಕಿತ್ತು ಎಂದು ಕೇಂದ್ರ ಸಚಿವ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮುಖಂಡ ರಾಮ್ದಾಸ್ ಅಠಾವಳೆ ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಠಾವಳೆ, "ಕಮಲಾ ಹ್ಯಾರಿಸ್ ಅವರು ಅಮೆರಿಕದ ಉಪಾಧ್ಯಕ್ಷೆ ಆಗ್ತಾರೆ ಅಂದ್ರೆ, ಸೋನಿಯಾ ಗಾಂಧಿ ಏಕೆ ದೇಶದ ಪ್ರಧಾನಿ ಆಗಲು ಸಾಧ್ಯವಿಲ್ಲ? ಅವರೊಬ್ಬ ಭಾರತೀಯ ಪ್ರಜೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪತ್ನಿ ಹಾಗೂ ಲೋಕಸಭಾ ಸಂಸದೆ" ಎಂದರು.
ಇದನ್ನೂ ಓದಿ: ಮನಮೋಹನ್ ಸಿಂಗ್ ಜನ್ಮದಿನ.. ರಾಹುಲ್ ಗಾಂಧಿ, ಪೈಲಟ್, ಗೆಹ್ಲೋಟ್ರಿಂದ ಶುಭಾಶಯ
ಸೋನಿಯಾ ಗಾಂಧಿ ಅವರು ಲೋಕಸಭೆಗೆ ಆಯ್ಕೆಯಾದಾಗ, ನಾನು ಅವರನ್ನು ಯುಪಿಎ ಸರ್ಕಾರಕ್ಕೆ ಪ್ರಧಾನಿಯನ್ನಾಗಿ ಮಾಡಬೇಕೆಂದು ಪ್ರಸ್ತಾಪಿಸಿದ್ದೆ. ಕಾಂಗ್ರೆಸ್ ಬಹುಮತದಲ್ಲಿದ್ದಾಗ, ಅವರು ಅಧಿಕಾರಕ್ಕೆ ಬರಲು ಸಮರ್ಥ ಅಭ್ಯರ್ಥಿಯಾಗಿದ್ದರು. ಆದರೆ ಈಗ, ರಾಹುಲ್ ಗಾಂಧಿ ನಾಯಕತ್ವದಲ್ಲಿ ಪಕ್ಷ ಬೆಳೆಯಲು ಸಾಧ್ಯವಿಲ್ಲ ಎಂದು ಅಠಾವಳೆ ಹೇಳಿದರು.
ಈ ಹಿಂದೆ ಮನಮೋಹನ್ ಸಿಂಗ್ ಬದಲಿಗೆ ಶರದ್ ಪವಾರ್ ಅವರನ್ನು ಪ್ರಧಾನಿಯನ್ನಾಗಿ ಮಾಡಿದ್ದರೆ, ಕಾಂಗ್ರೆಸ್‌ನ ಸ್ಥಿತಿ ಇಷ್ಟು ಕೆಟ್ಟದಾಗಿ ಇರುತ್ತಿರಲಿಲ್ಲ. ಪಕ್ಷವು ಪವಾರ್ ಅವರನ್ನು ಅನೇಕ ಬಾರಿ ಅವಮಾನಿಸಿದೆ ಎಂದರು.