ನವದೆಹಲಿ :ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಭಿನಂದಿಸಿದ್ದು, ಚುನಾವಣಾ ಪ್ರಚಾರದಲ್ಲಿ ಅವರು ಮಾಡಿದ ಭಾಷಣಗಳು ಜನರಲ್ಲಿ ಧೈರ್ಯ ತುಂಬಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೋ ಬೈಡನ್ ಹಾಗೂ ನೂತನ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರಿಗೆ ಅಭಿನಂದನಾ ಪತ್ರಗಳನ್ನು ಕಳುಹಿಸಿರುವ ಅವರು, ಡೆಮಾಕ್ರಟಿಕ್ ಪಕ್ಷದ ಜಯವನ್ನು ಕಪ್ಪು ಅಮೆರಿಕನ್ನರು ಹಾಗೂ ಅನಿವಾಸಿ ಭಾರತೀಯ ವಿಜಯ ಎಂದು ಸೋನಿಯಾ ಗಾಂಧಿ ಬಣ್ಣಿಸಿದ್ದಾರೆ.
'ಜೋ ಬೈಡನ್ ಮಾಡಿದ ಭಾಷಣಗಳಲ್ಲಿ ಜನರ ಒತ್ತಡವನ್ನು ಗುಣಪಡಿಸುವ ಶಕ್ತಿ, ಲಿಂಗ ಮತ್ತು ಜನಾಂಗೀಯ ಸಮಾನತೆ ಅಂಶಗಳಿದ್ದು, ಜಾಗತಿಕ ಸಹಕಾರದ ಭರವಸೆ ಸಿಕ್ಕಿದೆ' ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಭಾರತೀಯ ಜನರಿಗೆ ಕಾಳಜಿಯಿದೆ. ಕಳೆದ ದಶಕಗಳಂತೆ ಎರಡೂ ದೇಶಗಳ ಜನರ ಕಲ್ಯಾಣಕ್ಕಾಗಿ ಭಾರತ ಮತ್ತು ಅಮೆರಿಕ ಒಟ್ಟಾಗಿ ಕೆಲಸ ಮಾಡುವುದನ್ನು ನಾವು ನಂಬುತ್ತೇವೆ ಎಂದು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಭರವಸೆ ವ್ಯಕ್ತಪಡಿಸಿದ್ದಾರೆ.
ವ್ಯಾಪಾರ, ಶಿಕ್ಷಣ, ತಂತ್ರಜ್ಞಾನ ಮತ್ತು ರಕ್ಷಣಾ ಸಹಕಾರವು ಅಮೆರಿಕ ಹಾಗೂ ಭಾರತದ ನಡುವೆ ಬಲವಾದ ಬಾಂಧವ್ಯವನ್ನು ಸೃಷ್ಟಿಸಿದೆ ಎಂದ ಸೋನಿಯಾ ಗಾಂಧಿ, ಬುದ್ಧಿವಂತ ಹಾಗೂ ಪ್ರಬಲ ನಾಯಕತ್ವದ ಅಡಿಯಲ್ಲಿ ನಿಕಟ ಸಂಬಂಧವನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಆಶಯ ವ್ಯಕ್ತಪಡಿದ್ದಾರೆ.