ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೂರು ವಾರಗಳ ಸಮಯ ಕೇಳಿದ್ದಾರೆ. ಇತ್ತೀಚೆಗಷ್ಟೇ ಕೋವಿಡ್‌ಗೆ ತುತ್ತಾಗಿರುವ ಸೋನಿಯಾ ಗಾಂಧಿ ಐಸೋಲೇಷನ್ನಲ್ಲಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ಜಾರಿ ಮಾಡಿತ್ತು.
ಈ ಸಂಬಂಧ ಅವರು ನಿನ್ನೆ ಅಂದರೆ ಬುಧವಾರ ದೆಹಲಿಯ ಇಡಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಬೇಕಿತ್ತು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಕೋವಿಡ್‌ಗೆ ತುತ್ತಾಗಿರುವ ಸೋನಿಯಾ ಗಾಂಧಿ ಐಸೋಲೇಷನ್ಗೆ ಒಳಗಾಗಿದ್ದು, ಕೋವಿಡ್ ನೆಗೆಟಿವ್ ವರದಿ ಬಂದಿಲ್ಲದ ಹಿನ್ನೆಲೆಯಲ್ಲಿ ಹಾಗೂ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಅವರು ವಿನಾಯಿತಿ ಕೋರಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಸಂಬಂಧ ಅವರು, ಜೂನ್ 2 ಮತ್ತು ಜೂನ್ 7 ರ ವೈದ್ಯಕೀಯ ವರದಿಗಳನ್ನು ಇಡಿಗೆ ನೀಡಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ಮೂರು ವಾರಗಳ ಸಮಯ ಕೇಳಿದ್ದಾರೆ. ಈ ಮಧ್ಯೆ, ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಅವರಿಗೆ ಜೂನ್ 13 ರಂದು ತನಿಖೆಗೆ ಹಾಜರಾಗುವಂತೆ ಇಡಿ ಮತ್ತೊಂದು ಸಮನ್ಸ್ ಜಾರಿ ಮಾಡಿದೆ.