ನವದೆಹಲಿ : ಹಿಂಸಾಚಾರಪೀಡಿತ ಮಣಿಪುರದಲ್ಲಿ ಶಾಂತಿ ಕಾಪಾಡುವಂತೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಮನವಿ ಮಾಡಿದ್ದಾರೆ. ಮಣಿಪುರ ಹಿಂಸಾಚಾರದ ಕುರಿತು ವಿಷಾದ ವ್ಯಕ್ತಪಡಿಸಿದ ಅವರು, ರಾಜ್ಯದ ಜನರ ಜೀವನವನ್ನು ಧ್ವಂಸಗೊಳಿಸಿದ ಹಿಂಸಾಚಾರವು ರಾಷ್ಟ್ರದ ಆತ್ಮಸಾಕ್ಷಿಯ ಮೇಲೆ ಆಳವಾದ ಗಾಯ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಕಾಂಗ್ರೆಸ್ ಹಂಚಿಕೊಂಡಿರುವ ವಿಡಿಯೋ ಸಂದೇಶದಲ್ಲಿ, ಹಿಂಸಾಚಾರದಿಂದಾಗಿ ಜನರು ಮನೆಗಳನ್ನು ತೊರೆದು ಹೋಗುವಂತೆ ಆಗಿದೆ. ತಮ್ಮ ಜೀವಿತಾವಧಿಯಲ್ಲಿ ಅವರು ನಿರ್ಮಿಸಿದ ಎಲ್ಲವನ್ನೂ ಬಿಟ್ಟು ವಲಸೆ ಹೋಗುವುದು ಅನಿವಾರ್ಯವಾಗಿದೆ ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ.
ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿರುವ ನಮ್ಮ ಸಹೋದರ ಸಹೋದರಿಯರು ಪರಸ್ಪರ ವಿರುದ್ಧವಾಗಿ ತಿರುಗುತ್ತಿರುವುದನ್ನು ನೋಡುವುದು ಹೃದಯ ವಿದ್ರಾವಕವಾಗಿದೆ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಮಣಿಪುರದ ಇತಿಹಾಸವು ಎಲ್ಲ ಜನಾಂಗಗಳು, ಧರ್ಮಗಳು ಮತ್ತು ಹಿನ್ನೆಲೆಗಳ ಜನರನ್ನು ಅಪ್ಪಿಕೊಳ್ಳುವ ಸಾಮರ್ಥ್ಯ ಮತ್ತು ವೈವಿಧ್ಯಮಯ ಸಮಾಜದ ಅಸಂಖ್ಯಾತ ಸಾಧ್ಯತೆಗಳಿಗೆ ಸಾಕ್ಷಿಯಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.