ನವದೆಹಲಿ: ದೇಶದ ಹೊಸ ರಾಷ್ಟ್ರಪತಿಗಳ ಆಯ್ಕೆಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. ಈ ಕುರಿತಾಗಿ ಈಗಾಗಲೇ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ರಾಜಕೀಯ ಪಕ್ಷಗಳು ಸೂಕ್ತ ಅಭ್ಯರ್ಥಿ ಆಯ್ಕೆಯ ತಂತ್ರಗಾರಿಕೆಯಲ್ಲಿ ತೊಡಗಿವೆ.
ಈ ನಿಟ್ಟಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಪ್ರಮುಖ ವಿಪಕ್ಷ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ನಿನ್ನೆ (ಶನಿವಾರ) ಅವರು ವಿವಿಧ ಪ್ರತಿಪಕ್ಷದ ನಾಯಕರನ್ನು ಭೇಟಿ ಮಾಡಿ ಚರ್ಚಿಸಿರುವ ಕುರಿತು ಪಕ್ಷ ಹೇಳಿಕೆ ಬಿಡುಗಡೆ ಮಾಡಿದೆ.
ದೇಶದ ಸಂವಿಧಾನ, ಪ್ರಜಾಪ್ರಭುತ್ವದ ಸಂಸ್ಥೆಗಳು ಮತ್ತು ನಾಗರಿಕರನ್ನು ಬಿಜೆಪಿಯ ಆಕ್ರಮಣದಿಂದ ರಕ್ಷಿಸುವ ರಾಷ್ಟ್ರಪತಿ ದೇಶಕ್ಕೆ ಬೇಕು ಎನ್ನುವುದು ಕಾಂಗ್ರೆಸ್‌ನ ನಿಲುವು ಎಂದು ಪಕ್ಷ ತಿಳಿಸಿದೆ. ದೇಶದ ಮುರಿದ ಸಾಮಾಜಿಕ ಸಂರಚನೆಗೆ ಸಾಂತ್ವನದ ಸ್ಪರ್ಶ ನೀಡುವ ಸಮರ್ಥ ವ್ಯಕ್ತಿ ರಾಷ್ಟ್ರಪತಿ ಸ್ಥಾನ ಅಲಂಕರಿಸಬೇಕು. ಹಾಗಾಗಿ, ದೇಶ ಹಾಗು ಜನರಿಗಾಗಿ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎದ್ದು ನಿಲ್ಲಬೇಕಾದ ಸಮಯ ಬಂದಿದೆ. ಈ ನಿಟ್ಟಿನಲ್ಲಿ ನಮ್ಮ ಚರ್ಚೆ, ಸಮಾಲೋಚನೆಗಳು ಮುಕ್ತವಾಗಿರಬೇಕು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜೊತೆಗೆ ಉಳಿದ ಪ್ರತಿಪಕ್ಷಗಳು ಈ ನಿಟ್ಟಿನಲ್ಲಿ ಮುಂದಡಿ ಇಡುತ್ತವೆ ಎಂಬ ನಂಬಿಕೆ ಇದೆ ಎಂದು ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ. ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ಪಕ್ಷ ಈವರೆಗೆ ಯಾವುದೇ ಅಭ್ಯರ್ಥಿಯ ಹೆಸರನ್ನು ಸೂಚಿಸಿಲ್ಲ.
ಇದನ್ನೂ ಓದಿ:ರಾಜ್ಯಸಭೆ ಫಲಿತಾಂಶ: ಲಾಭ-ನಷ್ಟದ ಲೆಕ್ಕಾಚಾರ ಶುರು, ಮೂರು ಪಕ್ಷಗಳ ಮುಂದಿನ ನಡೆ ಏನು?