ನವದೆಹಲಿ:ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಸಂಭ್ರಮದ ವಾತಾವರಣವಿದೆ. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭಾಶಯ ಕೋರಿದ್ದಾರೆ. 75 ವರ್ಷಗಳಲ್ಲಿ ದೇಶ ಹಲವಾರು ಸಾಧನೆಗಳನ್ನು ಮಾಡಿದೆ. ಆದರೆ ಇಂದಿನ 'ಸ್ವಯಂ ನಿಯೋಜಿತ ಸರ್ಕಾರ' ಸ್ವಾತಂತ್ರ್ಯ ಹೋರಾಟಗಾರರ ಮಹಾನ್ ತ್ಯಾಗ ಮತ್ತು ದೇಶದ ಅಮೋಘ ಸಾಧನೆಗಳನ್ನು ಕ್ಷುಲ್ಲಕಗೊಳಿಸಲು ಹೊರಟಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಂತಾರಾಷ್ಟ್ರೀಯ ರಂಗದಲ್ಲಿ ಅಳಿಸಲಾಗದ ಛಾಪು: ಕಳೆದ 75 ವರ್ಷಗಳಲ್ಲಿ ದೇಶವು ತನ್ನ ಪ್ರತಿಭಾವಂತ ಭಾರತೀಯರ ಕಠಿಣ ಪರಿಶ್ರಮದ ಬಲದಿಂದ ವಿಜ್ಞಾನ, ಶಿಕ್ಷಣ, ಆರೋಗ್ಯ ಮತ್ತು ಮಾಹಿತಿ ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ. ದೇಶವು ತನ್ನ ದೂರದೃಷ್ಟಿಯ ನಾಯಕರ ನೇತೃತ್ವದಲ್ಲಿ ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕ ಚುನಾವಣಾ ವ್ಯವಸ್ಥೆಯನ್ನು ಸ್ಥಾಪಿಸಿತು. ಅದು ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಬಲಪಡಿಸುತ್ತದೆ ಎಂದಿದ್ದಾರೆ.
75 ವರ್ಷಗಳಲ್ಲಿ ಹಲವು ಸಾಧನೆ: ನಾವು ಅನೇಕ ಸಾಧನೆಗಳನ್ನು ಮಾಡಿದ್ದೇವೆ. ಆದರೆ ಈಗಿನ ಸ್ವ-ಕೇಂದ್ರಿತ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರ ಮಹಾನ್ ತ್ಯಾಗ ಮತ್ತು ದೇಶದ ಅದ್ಭುತ ಸಾಧನೆಗಳನ್ನು ಅತ್ಯಲ್ಪವೆಂದು ಸಾಬೀತುಪಡಿಸಲು ಹೊರಟಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ.
'ರಾಜಕೀಯ ಲಾಭಕ್ಕಾಗಿ ಐತಿಹಾಸಿಕ ಸತ್ಯಗಳ ಬಗ್ಗೆ ಮಾಡಿದ ತಪ್ಪು ಹೇಳಿಕೆಗಳನ್ನು ಮತ್ತು ಗಾಂಧಿಯಂತಹ ಮಹಾನ್ ನಾಯಕರನ್ನು ಪ್ರಶ್ನಿಸುವ ಪ್ರತಿಯೊಂದು ಪ್ರಯತ್ನವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಕರ್ನಾಟಕದಲ್ಲಿ ಹರ್ ಘರ್ ತಿರಂಗಾ ಅಭಿಯಾನದಿಂದ ಜವಾಹರಲಾಲ್ ನೆಹರು ಅವರ ಹೆಸರನ್ನು ಬಿಜೆಪಿ ಕೈಬಿಟ್ಟಿದೆ ಎಂದು ಆರೋಪಿಸಿ ಗದ್ದಲ ಭುಗಿಲೆದ್ದ ನಂತರ ಸೋನಿಯಾ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಸೋನಿಯಾ ಗಾಂಧಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ರಾಹುಲ್ ಗಾಂಧಿ ಮತ್ತು ಪಕ್ಷದ ಇತರ ಹಲವು ಹಿರಿಯ ನಾಯಕರು ಕೂಡ ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ:ವಿವಿಧತೆಯಲ್ಲಿ ಏಕತೆಯೇ ಭಾರತದ ಶಕ್ತಿ.. 100ನೇ ವರ್ಷದ ಸ್ವಾತಂತ್ರ್ಯ ದಿನಕ್ಕೆ ಪಂಚ ಪ್ರಾಣ ಪ್ರತಿಪಾದಿಸಿದ ಮೋದಿ
ಗಾಂಧೀಜಿ ಪುತ್ಥಳಿಗೆ ಶ್ರದ್ಧಾಂಜಲಿ:ಸ್ವಾತಂತ್ರ್ಯ ದಿನದಂದು ಪಕ್ಷದ 'ಆಜಾದಿ ಗೌರವ್ ಯಾತ್ರೆ'ಯ ಅಂಗವಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಪಕ್ಷದ ಇತರ ನಾಯಕರು ಗಾಂಧಿ ಸ್ಮೃತಿಯನ್ನು ತಲುಪಿ ಮಹಾತ್ಮ ಗಾಂಧೀಜಿ ಪುತ್ಥಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಆನಂದ್ ಶರ್ಮಾ ಮತ್ತು ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪಕ್ಷದ 'ಆಜಾದಿ ಗೌರವ್ ಯಾತ್ರೆ'ಯಲ್ಲಿ ಭಾಗವಹಿಸಿದರು.