ಕರ್ನಾಟಕ

karnataka

ETV Bharat / bharat

ಮಹಿಳಾ ಮೀಸಲಾತಿಗೆ ಕಾಂಗ್ರೆಸ್​ ಬೆಂಬಲ, ತಡಮಾಡದೇ ಜಾರಿ ಮಾಡಿ: ಕೇಂದ್ರ ಸರ್ಕಾರಕ್ಕೆ ಸೋನಿಯಾ ಗಾಂಧಿ ಕಿವಿಮಾತು - Womens Reservation Bill

ಮಹಿಳಾ ಮೀಸಲಾತಿ ಮಸೂದೆ ಕುರಿತು ಇಂದು ಲೋಕಸಭೆಯಲ್ಲಿ ನಡೆದ ಚರ್ಚೆಯನ್ನು ಕಾಂಗ್ರೆಸ್​ ಪರವಾಗಿ ಸೋನಿಯಾ ಗಾಂಧಿ ಅವರು ಆರಂಭಿಸಿದರು. ಪಕ್ಷ ಮಸೂದೆಗೆ ಬೆಂಬಲ ನೀಡುತ್ತದೆ ಎಂದರು.

ಮಹಿಳಾ ಮೀಸಲಾತಿ
ಮಹಿಳಾ ಮೀಸಲಾತಿ

By ETV Bharat Karnataka Team

Published : Sep 20, 2023, 4:12 PM IST

ನವದೆಹಲಿ:ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಚುನಾವಣಾ ಗಿಮಿಕ್​ ಎಂದು ಟೀಕಿಸಿದ್ದ ಕಾಂಗ್ರೆಸ್​, ಇದೀಗ ವಿಧೇಯಕಕ್ಕೆ ಬೆಂಬಲ ನೀಡಲಾಗುವುದು. ಆದರೆ, ಅದರ ಜಾರಿಯ ವಿಳಂಬವನ್ನು ಪ್ರಶ್ನಿಸಿದೆ.

ಲೋಕಸಭೆಯಲ್ಲಿ ಮಸೂದೆ ಕುರಿತು ಆರಂಭಿಸಲಾದ ಚರ್ಚೆಯಲ್ಲಿ ಕಾಂಗ್ರೆಸ್​ ಪರವಾಗಿ ಮಾತು ಆರಂಭಿಸಿದ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು, ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್​ ಬೆಂಬಲಿಸಲಿದೆ. ಮೀಸಲಾತಿ ನೀಡಬೇಕು ಎಂಬುದು ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಕನಸಾಗಿತ್ತು. ಆದರೆ, ಈಗ ಸರ್ಕಾರ ಮಂಡಿಸಿರುವ ವಿಧೇಯಕವನ್ನು ತಡಮಾಡದೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಸಮಾಜದಲ್ಲಿ ಮಹಿಳೆ ಎಲ್ಲ ಸ್ತರದಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾಳೆ. ಮನೆಯ ಕೆಲಸದಿಂದ ಹಿಡಿದು ಹೊರಜಗತ್ತಿನ ಎಲ್ಲ ದೊಡ್ಡ ಹುದ್ದೆಗಳನ್ನೂ ಯಶಸ್ವಿಯಾಗಿ ಆಕೆ ನಿಭಾಯಿಸಬಲ್ಲಳು. ತಾಯಿಯಾಗಿ, ಗೃಹಿಣಿಯಾಗಿ ಮತ್ತು ವೃತ್ತಿಪರರ ಜವಾಬ್ದಾರಿಗಳನ್ನು ಸಾಮರ್ಥ್ಯಕ್ಕೂ ಮೀರಿ ಸಾಧಿಸಿದ್ದಾಳೆ. ಎಂಥದ್ದೇ ಸವಾಲನ್ನು ತಾಳ್ಮೆಯಿಂದ ಎದುರಿಸುವ ಶಕ್ತಿ ಇದೆ. ಹೀಗಾಗಿ ಪಕ್ಷವು ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸುತ್ತದೆ ಎಂದು ಸೋನಿಯಾ ಹೇಳಿದರು.

ನಾರಿಶಕ್ತಿಗೆ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಉದಾಹರಣೆ ನೀಡಿದ ಸೋನಿಯಾ ಅವರು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಪುರುಷರೊಂದಿಗೆ ಪ್ರಮುಖ ಪಾತ್ರವನ್ನು ವಹಿಸಿದ್ದರು. ಸರೋಜಿನಿ ನಾಯ್ಡು, ಸುಚೇತಾ ಕೃಪಲಾನಿ ಸೇರಿದಂತೆ ಹಲವಾರು ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳು ಪ್ರಖ್ಯಾತ ಪುರುಷ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಕಾಣಿಸುತ್ತವೆ. ಸ್ವಾತಂತ್ರ್ಯದ ನಂತರ, ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ವಿಸ್ತರಿಸಿತು ಎಂದು ಅಭಿಪ್ರಾಯಪಟ್ಟರು.

ಮಸೂದೆ ಅಂಗೀಕಾರಕ್ಕೆ ಮನವಿ:ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದನ್ನು ಮೆಚ್ಚಿಕೊಂಡ ಸೋನಿಯಾ ಅವರು, ಸಂಸತ್ತಿನ ಉಭಯ ಸದನಗಳ ಸದಸ್ಯರು ಇದನ್ನು ಸರ್ವಾನುಮತದಿಂದ ಅಂಗೀಕರಿಸಬೇಕೆಂದು ಮನವಿ ಮಾಡಿದರು. 'ನಾರಿ ಶಕ್ತಿ ವಂದನ ಅಧಿನಿಯಮ' ಭಾರತದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ. ಮೀಸಲಾತಿಯನ್ನು ಜಾರಿ ಮಾಡಲು ನಾವು ಬದ್ಧರಾಗಿದ್ದೇವೆ. ಇದು ಕಾನೂನಾಗಿ ಬಂದೇ ಬರುತ್ತದೆ ಎಂದು ರಾಷ್ಟ್ರದ ಎಲ್ಲಾ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಭರವಸೆ ನೀಡುತ್ತೇನೆ ಎಂದರು.

ಚುನಾವಣಾ ಗಿಮಿಕ್​:ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದರೂ, ಅದು ಜಾರಿಯಾಗೋದು 2029 ರಲ್ಲಿ. ಹೀಗಾಗಿ ಇದೊಂದು ಚುನಾವಣಾ ಗಿಮಿಕ್​ ಆಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಂಗಳವಾರ ಟೀಕಿಸಿದ್ದರು. ಜನಗಣತಿ ಮತ್ತು ಕ್ಷೇತ್ರಗಳ ಪುನರ್​ವಿಂಗಡಣೆ ನಂತರವೇ ಸರ್ಕಾರ ತಂದಿರುವ ಮಹಿಳಾ ಮೀಸಲಾತಿ ಮಸೂದೆಯು ಜಾರಿಗೆ ಬರಲಿದೆ. ಹೀಗಾಗಿ ಮಂಡಿಸಿರುವ ವಿಧೇಯಕ ಬರೀ ಚುನಾವಣಾ ಗಿಮಿಕ್​ನಿಂದ ಕೂಡಿದೆ. ಇದು ಮಹಿಳೆಯರ ಆಶಯಗಳಿಗೆ ಭಾರಿ ದ್ರೋಹ ಎಸಗಿದಂತೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ:ಮಹಿಳಾ ಮೀಸಲಾತಿ ಅನುಷ್ಠಾನ ವಿಳಂಬ.. ಮಸೂದೆ ಮಂಡನೆ ಬರೀ ರಾಜಕೀಯ ಗಿಮಿಕ್​: ಕಾಂಗ್ರೆಸ್​

ABOUT THE AUTHOR

...view details