ಕೋಲ್ಕತ್ತಾ:ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಸಿಗದ ಕಾರಣ ತೃಣಮೂಲ ಕಾಂಗ್ರೆಸ್ನಿಂದ ಬಿಜೆಪಿ ಸೇರಿದ್ದ ಸೋನಾಲಿ ಗುಹಾ ಇದೀಗ ದೀದಿ ಇಲ್ಲದೇ ಬದುಕಲಾರೆ ಎಂದು ಹೇಳಿಕೊಂಡಿದ್ದಾರೆ.
ಕೇಸರಿ ಪಡೆ ಸೇರಿಕೊಂಡು ಚುನಾವಣೆ ಎದುರಿಸಿದ್ದ ಸೋನಾಲಿ ಇದೀಗ ಮಾತೃಪಕ್ಷ ತೃಣಮೂಲ ಕಾಂಗ್ರೆಸ್ಗೆ ಮರಳುವ ಇಂಗಿತ ಹೊರ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿದ್ದಾರೆ.
ತೀವ್ರ ನಿರಾಸೆಯಿಂದ ಪಕ್ಷ ತೊರೆದಿದ್ದಾಗಿ ಹೇಳಿಕೊಂಡಿರುವ ಗುಹಾ, ದೊಡ್ಡ ತಪ್ಪು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿಯನ್ನುದ್ದೇಶಿಸಿ ಬಂಗಾಳಿಯಲ್ಲಿ ಭಾವನಾತ್ಮಕ ಟ್ವೀಟ್ ಮಾಡಿರುವ ಮಾಜಿ ಶಾಸಕಿ, ನಾನು ಬಿಜೆಪಿಯಲ್ಲಿ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ಮೀನು ನೀರಿನಿಂದ ಹೊರಗುಳಿಯಲು ಸಾಧ್ಯವಿಲ್ಲವೂ, ನಾನು ಕೂಡ ನೀವು ಇಲ್ಲದೇ ಬದುಕಲು ಸಾಧ್ಯವಿಲ್ಲ ದೀದಿ. ನಿಮ್ಮ ಬಳಿ ಕ್ಷಮೆ ಕೋರುತ್ತೇನೆ. ನನ್ನನ್ನು ಕ್ಷಮಿಸಿ ಎಂದಿದ್ದಾರೆ.
ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನಲ್ಲಿ ಹಠಾತ್ ಬೆಂಕಿ... ಕ್ಷಣಾರ್ಧದಲ್ಲಿ ಹೊತ್ತಿ ಉರಿದ ವಾಹನ
ಗುಹಾ ಅವರ ಟ್ವೀಟ್ಗೆ ತೃಣಮೂಲ ಕಾಂಗ್ರೆಸ್ನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಟಿಎಂಸಿ ನಾಯಕ, ಮಮತಾ ಬ್ಯಾನರ್ಜಿ ಅವರಿಗೆ ಎಲ್ಲವನ್ನೂ ಕೊಟ್ಟರು. ಆದರೆ ಪಕ್ಷಕ್ಕೆ ಹೆಚ್ಚು ಅಗತ್ಯವಿದ್ದಾಗ ನಮಗೆ ಕೈಕೊಟ್ಟಿದ್ದಾರೆ. ಇದೀಗ ಅವರು ಮತ್ತೊಮ್ಮೆ ಪಕ್ಷಕ್ಕೆ ಬಂದರೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದಿದ್ದಾರೆ. ನಾಲ್ಕು ಸಲ ಟಿಎಂಸಿಯಿಂದ ಶಾಸಕಿಯಾಗಿದ್ದ ಸೋನಾಲಿ ಗುಹಾ, ಪ್ರಸಕ್ತ ವಿಧಾನಸಭೆಗೂ ಮುಂಚಿತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.