ಶಹೀದ್ ಭಗತ್ಸಿಂಗ್ ನಗರ(ಪಂಜಾಬ್): ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್ ಸಿಂಗ್ ಇಂದು ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ. ಖಟ್ಕರ್ ಕಲಾನ್‌ನ ಶಹೀದ್ ಭಗತ್ ಸಿಂಗ್ ನಗರದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈ ಸಮಾರಂಭ ಅಪರೂಪದ ಘಟನೆಗೂ ಸಾಕ್ಷಿಯಾಯಿತು.
ಕಳೆದ ಏಳು ವರ್ಷಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಪುತ್ರನೋರ್ವ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪತ್ತೆಯಾಗಿದ್ದಾನೆ.
ಫರೀದ್ಕೋಟ್ ಜಿಲ್ಲೆಯ ಶೇರ್ ಸಿಂಗ್ ವಾಲಾ ಗ್ರಾಮದ ನಿವಾಸಿ 29 ವರ್ಷದ ಜಸ್ವಿಂದರ್ ಸಿಂಗ್ ಏಳು ವರ್ಷಗಳ ಹಿಂದೆ ಕಾಣೆಯಾಗಿದ್ದರು. ಸೇನಾ ನೇಮಕಾತಿ ತಯಾರಿ ನಡೆಸಲು ತೆರಳಿದ್ದ ಜಸ್ವಿಂದರ್ 2015ರಲ್ಲಿ ನಾಪತ್ತೆಯಾಗಿದ್ದರು. ಆತನಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದ ಕುಟುಂಬಸ್ಥರು ಪತ್ತೆಯಾಗದ ಕಾರಣ ಸುಮ್ಮನಾಗಿದ್ದರು.
ಇದನ್ನೂ ಓದಿ:ಪಂಜಾಬ್‌ಗೆ ಇನ್ಮೇಲೆ ಶಕ್ತಿ'ಮಾನ್' ಆಡಳಿತ.. ಪದಗ್ರಹಣ ಬಳಿಕ ಸಿಎಂ ಮೊದಲ ಆದೇಶ ಬಲು ಖಡಕ್..
ಪುತ್ರನನ್ನು ಕುಟುಂಬಕ್ಕೆ ಸೇರಿಸಿದ ಕಾರ್ಯಕ್ರಮ: ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಿದ್ಧತೆ ಸಮಯದಲ್ಲಿ ಜಸ್ವಿಂದರ್ ಸಿಂಗ್ ಪತ್ತೆಯಾಗಿದ್ದಾನೆ. ಈತನ ಬಗ್ಗೆ ಮಾಹಿತಿ ತಿಳಿದುಕೊಂಡ ಪೊಲೀಸರು ಕುಟುಂಬಕ್ಕೆ ಸೇರಿಸಿದ್ದಾರೆ.
ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಜಸ್ವಿಂದರ್ ಸಿಂಗ್ ಟೆಂಟ್ ಕೆಲಸ ಮಾಡ್ತಿದ್ದನು. ಈ ವೇಳೆ ಪೊಲೀಸರು ಆತನ ಗುರುತಿನ ಚೀಟಿ ಕೇಳಿದ್ದಾರೆ. ಅದನ್ನ ನೀಡಲು ವಿಫಲವಾಗಿರುವ ಕಾರಣ, ಆತನನ್ನ ಫರೀದ್ಕೋಟ್ ಜಿಲ್ಲೆಯ ಸಾದಿಕ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ಈ ವೇಳೆ ತನ್ನ ಮಾಹಿತಿ ಹಂಚಿಕೊಂಡಿದ್ದಾನೆ. ಇದರ ಬೆನ್ನಲ್ಲೇ ಆತನ ಕುಟುಂಬವನ್ನ ಸಂಪರ್ಕಿಸಿ, ಮಾಹಿತಿ ಪಡೆದುಕೊಳ್ಳಲಾಗಿದೆ.
ಮನೆಯಲ್ಲಿ ಸಂಭ್ರಮದ ವಾತಾವರಣ: ಸುಮಾರು ಏಳು ವರ್ಷಗಳ ನಂತರ ಜಸ್ವಿಂದರ್ ಮನೆಗೆ ಬಂದಿರುವ ಕಾರಣ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದ್ದು, ಆತನ ಸಹೋದರಿಯರು ರಾಖಿ ಕಟ್ಟಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಜಸ್ವಿಂದರ್ ಸಿಂಗ್, ನನಗೆ ಗೊತ್ತಿಲ್ಲದ ವ್ಯಕ್ತಿಯೋರ್ವ ಅಮೃತಸರಕ್ಕೆ ಕರೆದೊಯ್ದರು. ಟೆಂಟ್ ಮಾಲೀಕರೊಂದಿಗೆ ಕೆಲಸ ಮಾಡುವಂತೆ ಸೂಚನೆ ನೀಡಿದರು. ಆದರೆ, ಅವರು ನನಗೆ ಪೂರ್ಣವಾದ ಸಂಬಳ ನೀಡಿಲ್ಲ. ನನ್ನ ಜೊತೆ ಅನೇಕ ಹುಡುಗರು ಕೆಲಸ ಮಾಡ್ತಿದ್ದಾರೆ ಎಂದಿದ್ದಾರೆ.