ಕರ್ನಾಟಕ

karnataka

ETV Bharat / bharat

95 ವರ್ಷದ ಹೆತ್ತವ್ವನ ಕೊಂದು ಸುಟ್ಟು ಹಾಕಿದ ಪುತ್ರ - Sets Her Body On Fire in Kandhamal

ಕ್ಷುಲ್ಲಕ ಕಾರಣಕ್ಕೆ 95 ವರ್ಷದ ಹೆತ್ತ ತಾಯಿಯನ್ನು ಮಗನೋರ್ವ ಕತ್ತು ಹಿಸುಕಿ ಕೊಲೆ ಮಾಡಿ, ಸುಟ್ಟು ಹಾಕಿರುವ ಘಟನೆ ಒಡಿಶಾದ ಕಂಧಮಾಲ್​ ಜಿಲ್ಲೆಯಲ್ಲಿ ನಡೆದಿದೆ.

Etv Bharat
Etv Bharat

By ETV Bharat Karnataka Team

Published : Oct 2, 2023, 6:44 PM IST

Updated : Oct 2, 2023, 9:19 PM IST

ಕಂಧಮಾಲ್​ (ಒಡಿಶಾ):ಪಾಪಿ ಮಗನೋರ್ವ ತನ್ನ 95 ವರ್ಷದ ಹೆತ್ತ ತಾಯಿಯನ್ನೇ ಬೆಂಕಿ ಹಚ್ಚಿ ಕೊಲೆಗೈದಿರುವ ಹೃದಯ ವಿದ್ರಾವಕ ಘಟನೆ ಒಡಿಶಾದ ಕಂಧಮಾಲ್​ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಶನಿವಾರ ತಡರಾತ್ರಿ ಜಿಲ್ಲೆಯ ಬಡಿಮುಂಡ ಗ್ರಾಮದ ಖಜುರಿಸಾಹಿ ಎಂಬಲ್ಲಿ ಘಟನೆ ನಡೆದಿದೆ. ಮೃತರನ್ನು ಮಂಜುಳಾ ನಾಯಕ್​ (95) ಎಂದು ಗುರುತಿಸಲಾಗಿದೆ. ಆರೋಪಿ ಸಮೀರ್​ ನಾಯಕ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಶನಿವಾರ ತಡರಾತ್ರಿ ಆರೋಪಿ ಸಮೀರ್ ನಾಯಕ್​ ಮನೆಗೆ ಬಂದಿದ್ದಾನೆ. ತಾಯಿ ಮಂಜುಳಾ ನಾಯಕ್​ ಜೊತೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆದಿದೆ. ಆರೋಪಿ ಕೋಪದಿಂದ ತಾಯಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ದುಷ್ಕೃತ್ಯದಿಂದ ಪಾರಾಗಲು ಸಾಕ್ಷ್ಯಗಳನ್ನು ನಾಶಪಡಿಸಲು ಮನೆಯೊಳಗೆ ತಾಯಿಯ ಶವಕ್ಕೆ ಬೆಂಕಿ ಹಚ್ಚಿದ್ದಾನೆ. ತಡರಾತ್ರಿ ಬೆಂಕಿ ಉರಿಯುತ್ತಿರುವುದನ್ನು ಕಂಡ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೂ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಮೃತ ಮಹಿಳೆಯ ಮೃತದೇಹವನ್ನು ಟಿಕಬಾಲಿ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೃತ್ಯ ಎಸಗಿದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಸಮೀರ್​ ಕಳೆದ ಒಂದು ವಾರದ ಹಿಂದೆಯಷ್ಟೇ ಪ್ರಕರಣ ಸಂಬಂಧ ಮೂರು ವರ್ಷಗಳ ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡಿದ್ದ. ಇದೀಗ ಹೆತ್ತ ತಾಯಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಮತ್ತೆ ಜೈಲುಪಾಲಾಗಿದ್ದಾನೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.

ಕುಡಿಯಲು ಹಣ ನೀಡದ್ದಕ್ಕೆ ಹೆತ್ತ ತಾಯಿಯನ್ನೇ ಕೊಂದ ಮಗ:ಕುಡಿಯಲು ಹಣ ನೀಡದ್ದಕ್ಕೆ ಹೆತ್ತ ತಾಯಿಯನ್ನೇ ಮಗ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕೆ.ಬಿದರೆ ಗ್ರಾಮದಲ್ಲಿ ಇಂದು ನಡೆದಿದೆ. ಮೃತರನ್ನು ಕಮಲಮ್ಮ (50) ಎಂದು ಗುರುತಿಸಲಾಗಿದೆ. ಸಂತೋಷ್ (30) ಕೊಲೆಗೈದ ಆರೋಪಿ. ಆರೋಪಿ ಸಂತೋಷ್​ ತಾಯಿಯನ್ನು ಹತ್ಯೆ ಮಾಡಿದ ಬಳಿಕ ತಂದೆ ಕಲ್ಲೇಶಪ್ಪ ಬಳಿಗೆ ತೆರಳಿ ವಿಷಯ ತಿಳಿಸಿದ್ದಾನೆ.

ಕುಡಿತದ ಚಟಕ್ಕೆ ದಾಸನಾಗಿದ್ದ ಸಂತೋಷ್ ಮದ್ಯ ಸೇವಿಸಿ ಮನೆಗೆ ಬಂದು ತಾಯಿಯೊಂದಿಗೆ ಜಗಳವಾಡುತ್ತಿದ್ದ. ಇಂದೂ ಕೂಡ ಕುಡಿಯಲು ಹಣ ನೀಡುವಂತೆ ಮನೆಗೆ ಬಂದು ತಾಯಿಯೊಂದಿಗೆ ಜಗಳವಾಡಿದ್ದಾನೆ. ಹಣ ನೀಡದ್ದಕ್ಕೆ ಆಕ್ರೋಶಗೊಂಡ ಸಂತೋಷ್​ ಹೆತ್ತಮ್ಮನನ್ನೇ ಕೊಲೆ ಮಾಡಿದ್ದಾನೆ ಎಂದು ಮಗನ ವಿರುದ್ಧ ಕಲ್ಲೇಶಪ್ಪ ಕಡೂರು ತಾಲೂಕಿನ ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಪತ್ನಿಯ ಖಾಸಗಿ ವಿಡಿಯೋ ತೋರಿಸಿ ಬ್ಲಾಕ್‌ಮೇಲ್‌ ಮಾಡುತ್ತಿದ್ದ ವ್ಯಕ್ತಿಗೆ ಹಲ್ಲೆ, ಆರೋಪಿ ಬಂಧನ

Last Updated : Oct 2, 2023, 9:19 PM IST

ABOUT THE AUTHOR

...view details