ಜೋಗುಲಂಬ, ತೆಲಂಗಾಣ :ಮೊಬೈಲ್ ತೆಗೆದುಕೊಳ್ಳಲು ಹಣ ನೀಡಲಿಲ್ಲವೆಂದು ಮಗನೇ ತಾಯಿಯನ್ನು ಬರ್ಬರವಾಗಿ ಕೊಂದ ಘಟನೆ ಜೋಗುಲಂಬ ಗದ್ವಾಲ್ ಜಿಲ್ಲೆಯ ಉಂಡವ್ಲಲಿ ಮಂಡಲ್ನ ಶೆರುಪಲ್ಲಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಿ ಎಂಬುವರು ಕೊಲೆಗೀಡಾಗಿದ್ದು, ಪುತ್ರ ಮಹೇಶ್ ಎಂಬಾತ ರುಬ್ಬುಗಲ್ಲು ಎತ್ತಿ ಹಾಕಿ ತಾಯಿಯನ್ನು ಕೊಲೆ ಮಾಡಿದ್ದಾನೆ. ಮೃತ ಮಹಿಳೆ ಕೂಲಿ ಕೆಲಸ ಮಾಡಿ, ಕುಟುಂಬ ನಿರ್ವಹಣೆ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.
ಕೊಲೆಯಾದ ಲಕ್ಷ್ಮಿವೆಂಕಟೇಶ್ವರುಲು ಎಂಬುವರ ಪತ್ನಿಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ವೆಂಕಟೇಶ್ವರುಲು ಅನಾರೋಗ್ಯ ಸಮಸ್ಯೆಯಿಂದ ಕೂಲಿ ಕೆಲಸಕ್ಕೆ ಕೆಲವು ದಿನಗಳಿಂದ ತೆರಳದೇ ಮನೆಯಲ್ಲಿ ಉಳಿದುಕೊಂಡಿದ್ದರು. ಲಕ್ಷ್ಮು ಕೂಲಿ ಕೆಲಸಕ್ಕೆ ತೆರಳಿ, ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಹಿರಿಯ ಮಗ ಮಹೇಶ್ ಇಂಟರ್ಮೀಡಿಯೇಟ್ ನಂತರ ಬೇರೆಯವರ ಜಮೀನುಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದ.
ಕೆಲವು ದಿನಗಳ ಹಿಂದೆ, ಮಹೇಶ್ ತನ್ನ ತಾಯಿ ಲಕ್ಷ್ಮಿಗೆ ಹೊಸ ಮೊಬೈಲ್ ಕೊಡಿಸುವಂತೆ ಕೇಳಿದ್ದಾನೆ. ಆದರೆ, ಆರ್ಥಿಕ ಪರಿಸ್ಥಿತಿಯಿಂದಾಗಿ ಅವರ ತಾಯಿ ಮೊಬೈಲ್ ಫೋನ್ ಕೊಡಿಸಲು ಸಾಧ್ಯವಾಗಲಿಲ್ಲ. ಮಂಗಳವಾರ ಮತ್ತೆ ಫೋನ್ ಕೊಡಿಸುವಂತೆ ಕೇಳಿದ್ದಾನೆ. ಈ ವೇಳೆ ಮಾತಿನ ಚಕಮಕಿಯಾಗಿ, ಜಗಳವಾಗಿದೆ. ಈ ವೇಳೆ ಮಹೇಶ್ ರುಬ್ಬುಗುಂಡಿನಿಂದ ಹಲ್ಲೆ ನಡೆಸಿದ್ದಾನೆ. ಲಕ್ಷ್ಮಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ಆ್ಯಂಬುಲೆನ್ಸ್ಗೆ ಫೋನ್ ಮಾಡಿದ್ದು, ಆ್ಯಂಬುಲೆನ್ಸ್ ಬರುವ ವೇಳೆಗೆ ತೀವ್ರ ರಕ್ತಸ್ರಾವದಿಂದ ಲಕ್ಷ್ಮಿ ಸಾವನ್ನಪ್ಪಿದ್ದಾರೆ.
ಮೊಬೈಲ್ ವಿಚಾರಕ್ಕೆ ತಾಯಿಯನ್ನು ಕೊಂದ ಮಗ ಮಕ್ಕಳಿಬ್ಬರೂ ಕ್ರಿಮಿನಲ್ಗಳು :ಕಿರಿಯ ಮಗ ಸಾಲೆಮನ್ ಇತ್ತೀಚೆಗೆ ಕಾರೊಂದರ ಗಾಜುಗಳನ್ನು ಒಡೆದು, ಇಬ್ಬರನ್ನು ಗಾಯಗೊಳಿಸಿದ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದನು. ಇನ್ನು ಮಹೇಶ್ ಕೆಲವು ದಿನಗಳ ಹಿಂದೆ ತೋಟವೊಂದರಲ್ಲಿದ್ದ ಒಣಗಿದ್ದ ಮೆಣಸಿನಕಾಯಿ ಗಿಡಗಳ ರಾಶಿಗೆ ಬೆಂಕಿ ಇಟ್ಟು, ಅದರೊಳಗೆ ಹಾರಿದ್ದು, ಕೈಗಳಿಗೆ ಗಾಯ ಮಾಡಿಕೊಂಡಿದ್ದನು. ಇದರಿಂದಾಗಿ ಅವನ ಗಾಯಗಳನ್ನು ಗುಣಪಡಿಸುವ ಸಲುವಾಗಿ ಲಕ್ಷ್ಮಿ ಮನೆಯಲ್ಲಿಯೇ ಇದ್ದಳು ಎಂದು ತಿಳಿದು ಬಂದಿದ್ದು, ಇದೇ ವೇಳೆ ಮೊಬೈಲ್ ಫೋನ್ಗಾಗಿ ಜಗಳ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ:ಸದಾ ಫೋನ್ನಲ್ಲಿ ಮಾತನಾಡುತ್ತಾಳೆ ಎಂದು ಪತ್ನಿಯನ್ನ ಬರ್ಬರವಾಗಿ ಕೊಂದ ಪತಿ