ಕಾನ್ಪುರ (ಉತ್ತರಪ್ರದೇಶ) :ಕಾರು ಅಪಘಾತಕ್ಕೀಡಾದಾಗ ಜೀವ ರಕ್ಷಣಾ ಕವಚಗಳನ್ನು ಅಳವಡಿಸಲಾಗಿರುತ್ತದೆ. ಅದರಲ್ಲಿ ಏರ್ಬ್ಯಾಗ್ ಕೂಡ ಒಂದಾಗಿದೆ. ಉತ್ತರಪ್ರದೇಶದ ಕಾನ್ಪುರದಲ್ಲಿ ವೈದ್ಯರ ಕಾರು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದರೂ, ಏರ್ಬ್ಯಾಗ್ ಮಾತ್ರ ತೆರೆದುಕೊಂಡಿಲ್ಲ. ಇದರಿಂದಾಗಿ ತನ್ನ ಮಗ ಸಾವಿಗೀಡಾಗಿದ್ದಾನೆ ಎಂದು ಮಹೀಂದ್ರಾ ಸಂಸ್ಥೆಯ ವಿರುದ್ಧ ಕೇಸ್ ಹಾಕಲಾಗಿದೆ.
ಘಟನೆಯನ್ನು ಮಹೀಂದ್ರಾ ಗ್ರೂಪ್ ಮೊದಲು ನಿರ್ಲಕ್ಷಿಸಿತ್ತು. ಇದರ ವಿರುದ್ಧ ಕೋರ್ಟ್ ಮೊರೆ ಹೋದ ಬಳಿಕ ಪೊಲೀಸರು ಗ್ರೂಪ್ ಅಧ್ಯಕ್ಷರು ಸೇರಿದಂತೆ 13 ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.
ಘಟನೆಯ ವಿವರ:2021 ರಲ್ಲಿ ಈ ಅಪಘಾತ ಸಂಭವಿಸಿತ್ತು. ಕಾನ್ಪುರದ ಜೂಹಿ ನಿವಾಸಿಯಾದ ವೈದ್ಯ ಅಪೂರ್ವ್ ಎಂಬುವರು ಸಾವಿಗೀಡಾದವರು. ವೈದ್ಯ ಅಪೂರ್ವ್ ಅವರು ಜನವರಿ 14 ರಂದು ಸ್ನೇಹಿತರೊಂದಿಗೆ ಕಾನ್ಪುರಕ್ಕೆ ಮಹೀಂದ್ರಾ ಸಂಸ್ಥೆಯ ಸ್ಕಾರ್ಪಿಯೋ ಕಾರಿನಲ್ಲಿ ತೆರಳುತ್ತಿದ್ದರು. ತಂದೆ ರಾಜೇಶ್ ಮಿಶ್ರಾ ಅವರು ಈ ಕಾರನ್ನು ತಮ್ಮ ವೈದ್ಯ ಪುತ್ರ ಅಪೂರ್ವಗೆ 2020 ರಲ್ಲಿ ಉಡುಗೊರೆಯಾಗಿ ನೀಡಿದ್ದರು. ಒಂದು ವರ್ಷದಿಂದ ಅವರ ಕಾರನ್ನು ಬಳಸುತ್ತಿದ್ದರು.
ಕಾನ್ಪುರಕ್ಕೆ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಇದಾದ ಬಳಿಕ ಹಲವು ಬಾರಿ ರಸ್ತೆಯ ಮೇಲೆ ಪಲ್ಟಿ ಹೊಡೆದಿದೆ. ಬಳಿಕ ಮರಕ್ಕೆ ಡಿಕ್ಕಿಯಾಗಿದೆ. ಭೀಕರ ಅಪಘಾತದ ವೇಳೆ ಡಾ.ಅಪೂರ್ವ ಅವರು ಮತ್ತು ಅವರ ಸ್ನೇಹಿತರು ಸೀಟ್ ಬೆಲ್ಟ್ ಹಾಕಿಕೊಂಡಿದ್ದರು. ಇಂತಹ ದೊಡ್ಡ ದುರಂತ ಸಂಭವಿಸಿದ್ದರೂ, ಜೀವ ರಕ್ಷಕವಾದ ಏರ್ಬ್ಯಾಗ್ ತೆರೆದುಕೊಂಡಿರಲಿಲ್ಲ.