ನ್ಯೂಸ್ ಡೆಸ್ಕ್ (ಹೈದರಾಬಾದ್): ಕಾರು ಖರೀದಿಸಲು ಹಣ ನೀಡದ ಕಾರಣಕ್ಕೆ ಮಗನೊಬ್ಬ ತನ್ನ ತಂದೆಯಿಂದ ಹಣ ವಸೂಲಿ ಮಾಡಲು ಖತರ್ನಾಕ್ ಪ್ಲಾನ್ ಮಾಡಿ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಅಸ್ಸೋಂನ ಜೋರ್ಹತ್ ಜಿಲ್ಲೆಯಲ್ಲಿ ನಡೆದಿದೆ.
ಜೋರ್ಹತ್ ನಿವಾಸಿ ರಾಧೇಶ್ಯಾಮ್ ಪ್ರಸಾದ್ ಎಂಬುವವರ ಮಗ ಅಮರಜ್ಯೋತಿ ಪ್ರಸಾದ್ ನವೆಂಬರ್ 30ರಂದು ಸಂಜೆ ಬೈಕ್‌ನಲ್ಲಿ ಮನೆಯಿಂದ ತೆರಳಿದ್ದರು. ಆದರೆ, ಬಹಳ ಹೊತ್ತಿನ ನಂತರವೂ ಅಮರಜ್ಯೋತಿ ಮನೆಗೆ ಬಾರದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ನಂತರ ತನ್ನನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂಬ ಕಥೆ ಕಟ್ಟಿ ತಂದೆಗೆ ಕರೆ ಮಾಡಿದ್ದ. ಅಲ್ಲದೇ, 50 ಲಕ್ಷ ರೂ. ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದ.
ಇದನ್ನೂ ಓದಿ:ವಿಕಲಚೇತನ ವ್ಯಾಪಾರಿಗೆ ಬಂದೂಕು ತೋರಿಸಿ ಲಕ್ಷಾಂತರ ರೂ ದೋಚಿದ ಮುಸುಕುಧಾರಿಗಳು
ಆದರೆ, ತಮ್ಮ ಮಗನನ್ನು ನಿಜವಾಗಿಯೋ ಕಿಡ್ನಾಪ್ ಮಾಡಿದ್ದಾರೆ ಎಂದು ನಂಬಿದ್ದ ತಂದೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದಾದ ನಂತರ ಈ ಘಟನೆ ಇಡೀ ಜೋರ್ಹತ್ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು. ಇತ್ತ, ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸ್ ತಂಡವು ಕೂಲಂಕಷವಾಗಿ ತನಿಖೆ ಆರಂಭಿಸಿ, ಆರೋಪಿಗಳ ಬಂಧನಕ್ಕೆ ಬಲೆ ಬೀಸಿತ್ತು.
ಗೆಳೆಯನೊಂದಿಗೆ ಸೇರಿ ಕಥೆ ಕಟ್ಟಿದ್ದ ನಾಟಕ:ಪುತ್ರ ಅಮರಜ್ಯೋತಿ ಬಿಡಬೇಕಾದರೆ 50 ಲಕ್ಷ ರೂ. ಹಣ ನೀಡಬೇಕು. ನಾವು ಹೇಳಿದ ಸ್ಥಳಕ್ಕೆ ಹಣವನ್ನು ತಲುಪಿಸಬೇಕೆಂದು ರಾಧೇಶ್ಯಾಮ್ ಪ್ರಸಾದ್ ಅವರಿಗೆ ಸೂಚಿಸಲಾಗಿತ್ತು. ಅಂತೆಯೇ, ಇದರ ಮಾಹಿತಿ ಅರಿತ ಪೊಲೀಸರ ತಂಡವು ರಾಧೇಶ್ಯಾಮ್ ಪ್ರಸಾದ್ ಅವರಿಗೆ ಹಣ ತೆಗೆದುಕೊಂಡು ಬರುವಂತೆ ತಿಳಿಸಿದ್ದ ಸ್ಥಳಕ್ಕೆ ಸಾಮಾನ್ಯ ಉಡುಪಿನಲ್ಲಿ ತಲುಪಿತ್ತು.
ಇದನ್ನೂ ಓದಿ:ಡಿಸೆಂಬರ್ 5ರ ರಾತ್ರಿ 8 ಗಂಟೆಗೆ ತಾಯಿ ನಿಧನವಾಗಲಿದ್ದಾರೆ, ಎರಡು ದಿನ ರಜೆ ಬೇಕು: ಶಿಕ್ಷಕನ ಪತ್ರ ವೈರಲ್
ಆಗ ಇದೊಂದು ಕಟ್ಟು ಕಥೆ ಎಂಬುವುದು ಪೊಲೀಸರಿಗೆ ಗೊತ್ತಾಗಿದೆ. ನಂತರ ರೆಸಾರ್ಟ್‌ವೊಂದರಲ್ಲಿ ಕುಳಿತಿದ್ದ ಕಥಾನಾಯಕ ಅಮರಜ್ಯೋತಿ ಪ್ರಸಾದ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಅಮರಜ್ಯೋತಿ ತನ್ನ ಆತ್ಮೀಯ ಸ್ನೇಹಿತ ರಮೇಶ್ ಕುಮಾರ್ ಸಾಹು ಜೊತೆ ಸೇರಿಕೊಂಡು ಅಪಹರಣದ ನಾಟಕ ಮಾಡಿರುವುದು ಬಯಲಾಗಿದೆ.
ಅಲ್ಲದೇ, ಕಾರು ಖರೀದಿಸಲು ತಂದೆ ರಾಧೇಶ್ಯಾಮ್ ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಇಂತಹ ನಕಲಿ ಅಪಹರಣದ ಕಥೆ ಸೃಷ್ಟಿಸಲಾಗಿತ್ತು ಎಂದೂ ಚಲಾಕಿ ಅಮರಜ್ಯೋತಿ ಬಾಯ್ಬಿಟ್ಟಿದ್ದಾನೆ. ಸದ್ಯ ಅಮರಜ್ಯೋತಿ ಪ್ರಸಾದ್ ಹಾಗೂ ಗೆಳೆಯ ರಮೇಶ್ ಕುಮಾರ್ ಸಾಹು ಇಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ.
ಇದನ್ನೂ ಓದಿ:ನೆರೆಮನೆಯ ಯುವಕನ ಮೇಲೆ ಸುಳ್ಳು ಅತ್ಯಾಚಾರ ಆರೋಪ: 5 ವರ್ಷದ ನಂತರ ಡಿಎನ್ಎ ಪರೀಕ್ಷೆಯಲ್ಲಿ ಸತ್ಯಾಂಶ ಬಯಲು