ಪ್ರಯಾಗ್‌ರಾಜ್:ತನಗೆ ಬರುತ್ತಿದ್ದ ಬೆದರಿಕೆ ಕರೆಗಳಿಂದ ತಪ್ಪಿಸಿಕೊಳ್ಳಲು ಯುವಕನೊಬ್ಬ ತಾನೇ ಅಪಹರಣಕಾರ ಎಂದು ಬಿಂಬಿಸಿಕೊಂಡು, ತಂದೆಯಿಂದ 2 ಲಕ್ಷ ರೂಪಾಯಿ ಬೇಡಿಕೆ ಇಟ್ಟು ಪೇಚಿಗೆ ಸಿಲುಕಿದ ಘಟನೆ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ನಕಲಿ ಅಪಹರಣಕಾರನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ವಾಸವಿದ್ದ ಆರೋಪಿ ಅಭಿಷೇಕ್ ತಿವಾರಿ, ತನ್ನ ತಂದೆ ಜ್ಯೋತಿಶ್ ತಿವಾರಿಗೆ ವಾಟ್ಸ್ಆ್ಯಪ್ ಕರೆ ಮಾಡಿ ಕೆಲವರು ತನ್ನನ್ನು ಕಪ್ಪುಬಟ್ಟೆಯಲ್ಲಿ ಸುತ್ತಿ ಅಪಹರಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ.
ನಿರ್ಜನ ಪ್ರದೇಶದಲ್ಲಿ ತನ್ನನ್ನು ಇಡಲಾಗಿದೆ ಎಂದು ಅಪಹರಣಗೊಂಡ ಅಭಿಷೇಕ್ ತಿಳಿಸಿದ್ದಾನೆ. ಬಳಿಕ ಅಪಹರಣಕಾರನಂತೆ 2 ಲಕ್ಷ ರೂಪಾಯಿ ಕೊಡಲು ಬೇಡಿಕೆ ಇಟ್ಟಿದ್ದಾನೆ. ಬಳಿಕ ಎರಡನೇ ಬಾರಿ ಕರೆ ಮಾಡಿ 2 ಲಕ್ಷ ನೀಡದಿದ್ದರೆ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಅಪಹರಣಕಾರನ ಬೆದರಿಕೆಯಿಂದಾಗಿ ಅಭಿಷೇಕ್ ಅವರ ತಂದೆ ಭಯಗೊಂಡು ಮಗ ಉಳಿದಿದ್ದ ಪ್ರಯಾಗ್‌ರಾಜ್ ಬಂದು ಪರಿಶೀಲಿಸಿದ್ದಾನೆ. ಅಲ್ಲಿ ಮಗ ಇಲ್ಲದಿರುವುದು ಭೀತಿ ಮೂಡಿಸಿದೆ. ಬಳಿಕ ಪುತ್ರ ಅಪಹರಣವಾಗಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಅಪಹರಣಕಾರನ ಬೆನ್ನತ್ತಿದ್ದ ಪೊಲೀಸ್:ಹಗಲು ಹೊತ್ತಿನಲ್ಲಿ ಅಪಹರಣದ ದೂರು ಪಡೆದ ಪೊಲೀಸರು ಚುರುಕಾಗಿದ್ದಾರೆ. ಕ್ರೈಂ ಬ್ರಾಂಚ್ಗೂ ಕೂಡ ಪ್ರಕರಣದ ಮಾಹಿತಿ ನೀಡಲಾಗಿದೆ. ಬಳಿಕ ತನಿಖೆ ನಡೆಸಿ, ಅಪಹರಣಕಾರನನ್ನು ಹಿಡಿಯಬೇಕು ಎಂಬುವಷ್ಟರಲ್ಲಿ ಕತೆಯೇ ಬದಲಾಗಿದೆ. ಕಿಡ್ನ್ಯಾಪ್ ಆಗಿದ್ದ ಅಭಿಷೇಕ್ ಅಪಹರಣದ ನಕಲಿ ನಾಟಕ ಬಯಲಾಗಿದೆ. ತನ್ನ ತಂದೆಯಿಂದ ತಾನೇ 2 ಲಕ್ಷ ರೂಪಾಯಿ ಸುಲಿಗೆಗೆ ಮುಂದಾಗಿದ್ದು ಗೊತ್ತಾಗಿದೆ.
ನಕಲಿ ಅಪಹರಣ ನಾಟಕ ಬಯಲು:ತನ್ನನ್ನು ಅಪಹರಣ ಮಾಡಲಾಗಿದೆ ಎಂದು ಬಿಂಬಿಸಿ ಪ್ರತಾಪ್‌ಗಢ ಜಿಲ್ಲೆಯಲ್ಲಿ ಅಡಗಿಕೊಂಡಿದ್ದ ಅಭಿಷೇಕ್ ತಿವಾರಿಯನ್ನು ಪೊಲೀಸರು ಪತ್ತೆ ಮಾಡಿದಾಗ ಆತನೊಬ್ಬನೇ ಸ್ಥಳದಲ್ಲಿ ಪತ್ತೆಯಾಗಿದ್ದ. ಅಪಹರಣಕಾರ ಮಾಡಿದ ತಂಡ, ಕಾರು ಅಲ್ಲಿರಲಿಲ್ಲ. ಅಭಿಷೇಕ್ನನ್ನು ಹಿಡಿದು ವಿಚಾರಿಸಿದಾಗ ಪ್ರಕರಣದ ಅಸಲಿ ಸತ್ಯ ಬಯಲಾಗಿದೆ. ತಾನು ನಕಲಿ ವಿಡಿಯೋ ಕಾಲ್ನಿಂದಾಗಿ ಬೆದರಿಕೆಗೆ ಒಳಗಾಗಿದ್ದೆ. ಹೀಗಾಗಿ ಹಣದ ಬೇಡಿಕೆ ಇಟ್ಟಿದ್ದೆ ಎಂಬ ಬಗ್ಗೆ ಬಾಯ್ಬಿಟ್ಟಿದ್ದಾನೆ.