ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) :ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಸೇನೆ ತಿಳಿಸಿದೆ.
ಜನವರಿ 11ರಂದು ಎಲ್‌ಒಸಿ ಬಳಿ ಕಾರ್ಯಾಚರಣೆ ನಡೆಯುತ್ತಿದ್ದಾಗ ಪಂಜಾಬ್ನ ಗುರುದಾಸ್ಪುರದ 24 ವರ್ಷದ ಯೋಧ ಗುರುಪ್ರೀತ್ ಸಿಂಗ್ ಅವರು ತೀವ್ರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಸೇನಾ ಶಿಬಿರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಆದರೆ, ಶುಕ್ರವಾರ ಅವರು ಕೊನೆಯುಸಿರೆಳೆದರು ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ಬಾರಾಮುಲ್ಲಾ ಸೆಕ್ಟರ್‌ನ ಫಾರ್ವರ್ಡ್ ಏರಿಯಾದಲ್ಲಿ ಕಾರ್ಯಾಚರಣೆಯ ಕಾರ್ಯವನ್ನು ನಿರ್ವಹಿಸುತ್ತಿರುವಾಗ ಜನರಲ್ ಗುರುಪ್ರೀತ್ ಸಿಂಗ್ ಅವರು ದುರದೃಷ್ಟಕರವಾಗಿ ನಮ್ಮನ್ನಗಲಿದ್ದಾರೆ ಎಂದು ತಿಳಿಸಲು ವಿಷಾದವಿದೆ. ಇಂತಹ ದುಃಖದ ಸಮಯದಲ್ಲಿ ಭಾರತೀಯ ಸೇನೆಯು ದುಃಖಿತ ಕುಟುಂಬದೊಂದಿಗೆ ಇರಲಿದೆ. ಅವರ ಯೋಗಕ್ಷೇಮ ನೋಡಿಕೊಳ್ಳಲು ಬದ್ಧವಾಗಿದೆ ಎಂದು ತಿಳಿಸಿದೆ.
ಯೋಧ ಗುರುಪ್ರೀತ್ಸಿಂಗ್ ಅವರು ತಾಯಿ ಲಖ್ವಿಂದರ್ ಕೌರ್ ಅವರನ್ನು ಅಗಲಿದ್ದಾರೆ ಎಂದು ಅದು ಹೇಳಿದೆ. ಚಿನಾರ್ ಕಾರ್ಪ್ಸ್ ಪಡೆ ವೀರಯೋಧ ಗುರುಪ್ರೀತ್ ಸಿಂಗ್ ಅವರಿಗೆ ಪುಷ್ಪಾಂಜಲಿ ಅರ್ಪಿಸಿ ನಮನ ಸಲ್ಲಿಸಿದೆ. ಅಗಲಿದ ಯೋಧನ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದೆ.