ಕೋಲ್ಕತ್ತಾ(ಪಶ್ಚಿಮ ಬಂಗಾಳ):ನಾಲ್ಕು ತಿಂಗಳ ಅಂತರದಲ್ಲಿ ಮೂರು ಸಲ ಮಾರಾಟಗೊಂಡು, ಹತ್ತಾರು ಕಾಮುಕರಿಂದ ಅತ್ಯಾಚಾರಕ್ಕೊಳಗಾಗಿದ್ದ ಯುವತಿಯೋರ್ವಳು ಇದೀಗ ಪಶ್ಚಿಮ ಬಂಗಾಳ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ. ತನ್ನ ಮೇಲೆ ನಡೆದ ಅತ್ಯಂತ ಅಮಾನವೀಯ ರೀತಿಯ ದುಷ್ಕೃತ್ಯದ ಕಹಿ ನೆನಪುಗಳನ್ನು ಮರೆತು ಹೊಸ ಜೀವನ ಕಟ್ಟಿಕೊಳ್ಳುವುದರತ್ತ ಆತ್ಮವಿಶ್ವಾಸದ ಹೆಜ್ಜೆ ಹಾಕಿದ್ದಾಳೆ.
22 ವರ್ಷದ ಈ ಸಂತ್ರಸ್ತೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪೋಕ್ಸೊ ಕೋರ್ಟ್ ಕಳೆದ ಇತ್ತೀಚೆಗೆ ಮಹತ್ವದ ತೀರ್ಪೊಂದನ್ನು ನೀಡಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ದುಷ್ಟರಿಗೆ 20 ವರ್ಷ ಹಾಗೂ ಮತ್ತಿಬ್ಬರಿಗೆ 10 ವರ್ಷಗಳ ಜೈಲುಸಜೆ ವಿಧಿಸಿ ಆದೇಶಿಸಿತ್ತು. ಸಂತ್ರಸ್ತೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದ ಪೊಲೀಸರು ಮಹಿಳಾ ಕೇಂದ್ರದಲ್ಲಿ ಆಶ್ರಯ ನೀಡಿದ್ದರು. ಇದೀಗ ಈಕೆ ಸೆಕೆಂಡರಿ ಪರೀಕ್ಷೆ ಪಾಸ್ ಆಗಿದ್ದಾಳೆ. ಮುಂದಿನ ಶಿಕ್ಷಣಕ್ಕೆ ದಾಖಲಾತಿ ಪಡೆದುಕೊಳ್ಳುವ ತವಕದಲ್ಲಿದ್ದಾಳೆ.
ಪ್ರಕರಣದ ಸಂಪೂರ್ಣ ವಿವರ: ಕಳೆದ ಏಳು ವರ್ಷಗಳ ಹಿಂದೆ ಈ ಯುವತಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ರಾಹುಲ್ ಎಂಬಾತನನ್ನು ಪ್ರೀತಿಸಲು ಶುರು ಮಾಡಿದ್ದಳು. ನಂತರದಲ್ಲಿ ಆತನನ್ನು ಮದುವೆಯಾಗಲು ಮನೆ ಬಿಟ್ಟು ಓಡಿ ಹೋಗಿದ್ದಾಳೆ. 2015ರ ಜನವರಿ ತಿಂಗಳಲ್ಲಿ ಕೋಲ್ಕತ್ತಾದ ಸೈನ್ಸ್ ಸಿಟಇ ಬಳಿ ಈ ಯುವಕ ಭೇಟಿಯಾಗಿದ್ದ. ಇದಾದ ಬಳಿಕ ಆಕೆಯನ್ನು ಬಿಹಾರದ ಬಸ್ನೊಳಗೆ ಕುಳ್ಳಿರಿಸಿ, ತಾನು ಆದಷ್ಟು ಬೇಗ ವಾಪಸ್ ಬರುವುದಾಗಿ ಹೇಳಿ ಹೊರಟು ಹೋಗಿದ್ದಾನೆ.
3 ಸಲ ಮಾರಾಟವಾದ ಸಂತ್ರಸ್ತೆ: ತಾನು ರಾಹುಲ್ ಗೆಳೆಯನೆಂದು ಯುವತಿಯ ಬಳಿ ಬಂದ ಇನ್ನೊಬ್ಬ ವ್ಯಕ್ತಿ ಆಕೆಯನ್ನು 1.5 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಾನೆ. ಇದಾದ ಬಳಿಕ ಕಮಲ್ ಎಂಬಾತ ಸಂತ್ರಸ್ತೆಯನ್ನು ಮತ್ತೋರ್ವನಿಗೆ ಮಾರಾಟ ಮಾಡಿದ. ಕೊನೆಯದಾಗಿ ಸಂತ್ರಸ್ತೆ ಉತ್ತರ ಪ್ರದೇಶದ ಬಿಜ್ನೋರ್ನ ಚಿತ್ರಾ ಎಂಬ ಮಹಿಳೆಗೆ ಮಾರಾಟವಾಗುತ್ತಾಳೆ. ಇಲ್ಲಿ 45 ವರ್ಷದ ವ್ಯಕ್ತಿಯ ಜೊತೆ ಬಲವಂತದ ಮದುವೆಯೂ ನಡೆಯುತ್ತದೆ. ನಂತರದಲ್ಲಿ ಯುವತಿಯು ಅನೇಕರಿಂದ ಸರಣಿ ಅತ್ಯಾಚಾರಕ್ಕೆ ಒಳಗಾಗುತ್ತಾಳೆ.
ಈ ಸಂದರ್ಭದಲ್ಲಿ ಒಂದು ದಿನ ಸಂತ್ರಸ್ತೆ, ಚಿತ್ರಾಳ ಮೊಬೈಲ್ ತೆಗೆದುಕೊಂಡು ತನ್ನ ತಾಯಿಗೆ ಕರೆ ಮಾಡಿ ಎಲ್ಲ ಮಾಹಿತಿ ನೀಡುತ್ತಾಳೆ. ಘಟನೆಯ ಬಗ್ಗೆ ಪಶ್ಚಿಮ ಬಂಗಾಳ ಪೊಲೀಸರಿಗೆ ವಿಚಾರ ಗೊತ್ತಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿ, ಆಕೆಯ ರಕ್ಷಣೆಯೂ ಆಗುತ್ತದೆ. ಸ್ನೇಹಿತ ರಾಹುಲ್ ಬಂಧನವೂ ನಡೆಯುತ್ತದೆ. ಬದುಕಿನ ಬಹುದೊಡ್ಡ ಅಘಾತಕ್ಕೊಳಗಾದ ಸಂತ್ರಸ್ತೆ, ಒಂದು ತಿಂಗಳ ಕಾಲ ಮೌನಕ್ಕೆ ಶರಣಾಗುತ್ತಾಳೆ. ಮನ:ಶಾಸ್ತ್ರಜ್ಞರ ಬಳಿ ಕರೆದೊಯ್ದು, ಆಪ್ತ ಸಮಾಲೋಚನೆಯ ಬಳಿಕ ತನ್ನ ಮೇಲೆ ನಡೆದ ಎಲ್ಲ ದುಷ್ಕೃತ್ಯಗಳನ್ನು ವಿವರಿಸಿ ಬಿಕ್ಕಿ ಬಿಕ್ಕಿ ಕಣ್ಣೀರು ಸುರಿಸಿ ಮನದ ವೇದನೆ ಹೊರ ಹಾಕಿದ್ದಾಳೆ.
ಇದನ್ನೂ ಓದಿ:ವೇಲ್ ಧರಿಸಿಲ್ಲವೆಂದು ಅಪ್ರಾಪ್ತ ಪ್ರೇಮಿಗಳ ನಡುವೆ ಜಗಳ: ಬಾಲಕ ಸಾವು, ವಿದ್ಯಾರ್ಥಿನಿ ಸ್ಥಿತಿ ಚಿಂತಾಜನಕ
ರಕ್ಷಣೆಯ ಬಳಿಕ ವಿದ್ಯಾಭ್ಯಾಸ ಆರಂಭ:ಇಷ್ಟೆಲ್ಲಾ ನಡೆದರೂ ಯುವತಿ ಕೊನೆಗೂ ಹೊಸ ಬದುಕಿನ ಭರವಸೆಯನ್ನು ಕಳೆದುಕೊಳ್ಳಲಿಲ್ಲ. ರಕ್ಷಣೆಯಾದ ಬಳಿಕ ಇದೀಗ ಮರಳಿ ಶಾಲೆಗೆ ತೆರಳಲು ಆರಂಭಿಸಿದ್ದಾಳೆ. ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾಳೆ. ಮುಂದಿನ ಉನ್ನತ ಶಿಕ್ಷಣಕ್ಕೂ ತಯಾರಾಗಿದ್ದಾಳೆ. ಯುವತಿಯ ಧೈರ್ಯ, ಆತ್ಮವಿಶ್ವಾಸಕ್ಕೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲ್, ಚಿತ್ರಾ ಹಾಗು ಆಕೆಯ ಸಹೋದರ ಲವ್ ಹಾಗೂ ಮತ್ತೋರ್ವ ಭಿಷಮ್ ಎಂಬ ದುಷ್ಟರ ಬಂಧನವಾಗಿದೆ. ರಾಹುಲ್ಗೆ ಈಗಾಗಲೇ 20 ವರ್ಷ ಶಿಕ್ಷೆ ವಿಧಿಸಲಾಗಿದೆ.