ಸೋಲನ್(ಹಿಮಾಚಲ ಪ್ರದೇಶ):ಇಲ್ಲಿನ ಕೈಗಾರಿಕಾ ಪ್ರದೇಶವಾದ ಬದ್ದಿಯಲ್ಲಿ 5 ವರ್ಷದ ಹಿಂದೆ ನಡೆದ 7 ವರ್ಷದ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿ ಜಿಲ್ಲಾ ತ್ವರಿತ ನ್ಯಾಯಾಲಯ ಆದೇಶಿಸಿದೆ. ಅಲ್ಲದೇ, ಅಪರಾಧಿಗೆ 25 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ. ಇದೇ ವೇಳೆ ಸಂತ್ರಸ್ತೆ ಕುಟುಂಬಕ್ಕೆ 12.50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.
ಘಟನೆ ಏನು?:5 ವರ್ಷದ ಹಿಂದೆ ಹಿಮಾಚಲ ಪ್ರದೇಶದ ಬದ್ದಿ ಎಂಬಲ್ಲಿ ವಲಸೆ ಬಂದಿದ್ದ ಕುಟುಂಬವೊಂದರ 7 ವರ್ಷದ ಬಾಲಕಿಯನ್ನು ಅಲ್ಲಿಯೇ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ ಆಕಾಶ್ ಎಂಬಾತ ರಾತ್ರಿ ವೇಳೆ ಅಪಹರಿಸಿ ಅತ್ಯಾಚಾರ ಮಾಡಿದ್ದ. ಬಳಿಕ ಬಾಲಕಿಯ ಗುಪ್ತಾಂಗದಲ್ಲಿ ಕಟ್ಟಿಗೆ ತುಂಡನ್ನು ಸೇರಿಸಿ ಕ್ರೌರ್ಯ ಮೆರೆದಿದ್ದ. ಅಲ್ಲದೇ, ಬಾಲಕಿ ಈ ವಿಷಯವನ್ನು ಬಾಯ್ಬಿಡುವ ಭಯದಲ್ಲಿ ಅವಳನ್ನು ಕತ್ತು ಹಿಸುಕಿ ಕೊಲೆ ಮಾಡಿ ಹೂತು ಹಾಕಿದ್ದ.