ಚಿತ್ತೂರು/ಟೆಕ್ಸಾಸ್ :ನಿಶ್ಚಿಯವಾಗಿದ್ದ ಮದುವೆಯನ್ನು ಯುವಕ ನಿರಾಕರಿಸಿದ್ದಕ್ಕೆ ಯುವತಿ ನೇಣಿಗೆ ಶರಣಾಗಿರುವ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ.
ಅಮೆರಿಕದ ಟೆಕ್ಸಾಸ್‌ನಲ್ಲಿ ಚಿತ್ತೂರು ಪೊಲೀಸ್ ಕಾಲೋನಿಯ ಶ್ರೀಹರಿಯ ಮಗಳು ಸುಷ್ಮಾ (25) ತನ್ನ ಸಹೋದರನ ಮನೆಯಲ್ಲಿದ್ದು, ವ್ಯಾಸಂಗದ ಜೊತೆ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಜಿಲ್ಲೆಯ ಪುತಲ್ಪಟ್ಟು ವಲಯದ ಬಂದರ್‌ಲಾಪಳ್ಳಿಯ ಮುರಳಿ ಮಗ ಭರತ್ ಟೆಕ್ಸಾಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇವರಿಬ್ಬರು ಟೆಕ್ಸಾಸ್ನಲ್ಲಿದ್ದ ಕಾರಣ ಇವರ ಕುಟುಂಬಸ್ಥರು ಇಬ್ಬರಿಗೂ ಮದುವೆ ಮಾಡಬೇಕು ಎಂದು ನಿಶ್ಚಿಯಿಸಿದ್ದರು. ಅದರಂತೆ ಇಬ್ಬರಿಗೂ ಇದೇ ತಿಂಗಳು ಮದುವೆ ಫಿಕ್ಸ್ ಆಗಿತ್ತು. ಮದುವೆಗೆ ಮನೆಯಲ್ಲಿ ಲಗ್ನಪತ್ರಿಕೆ ಮುದ್ರಿಸಿ ಭರ್ಜರಿ ತಯಾರಿ ನಡೆಸಿದ್ದರು. ಸುಮಾರು ಹತ್ತು ದಿನಗಳ ಹಿಂದೆ ಮದುವೆ ಸಮೀಪಿಸುತ್ತಿದ್ದಂತೆ ಇಬ್ಬರ ಮಧ್ಯೆ ಜಗಳವಾಗಿದೆ. ಇದರಿಂದಾಗಿ ಭರತ್ ಈ ಮದುವೆಯನ್ನು ನಿರಾಕರಿಸಿದ್ದಾನೆ.
ಈಗ ನಾನು ನಿಮ್ಮ ಮಗಳನ್ನು ಮದುವೆಯಾಗಲು ಬಯಸುವುದಿಲ್ಲ. ನನಗೆ ಇನ್ನಷ್ಟು ಕಾಲಾವಕಾಶಬೇಕು ಎಂದು ಯುವತಿ ಪೋಷಕರಿಗೆ ಭರತ್ ತಿಳಿಸಿದ್ದಾನೆ. ಇದರಿಂದ ಎರಡೂ ಕುಟುಂಬಗಳು ಇಬ್ಬರಿಗೂ ಬುದ್ಧಿ ಹೇಳಿದ್ದರು. ಕೆಲವು ದಿನಗಳ ನಂತರ ಎಲ್ಲವೂ ಸರಿಯಾಗುವುದೆಂದು ತಿಳಿದು ಎರಡು ಕುಟುಂಬಗಳು ಮದುವೆ ತಯಾರಿ ಮುನ್ನಡೆಸಿದ್ದರು.
ಆದ್ರೆ ಭರತ್ ಮದುವೆಗೆ ನಿರಾಕರಿಸಿದ್ದಾನೆ ಎಂದು ಮನಸ್ತಾಪಗೊಂಡ ಸುಷ್ಮಾ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ವಿಷಯವನ್ನು ಸಹೋದರ ಕುಟುಂಬಸ್ಥರಿಗೆ ತಿಳಿಸಿದ್ದು, ಸುಷ್ಮಾ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.