ನವದೆಹಲಿ : ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳು ಭಾರತದ ಕಾನೂನನ್ನು ಪಾಲಿಸಲೇಬೇಕು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಶುಕ್ರವಾರ ಪುನರುಚ್ಚರಿಸಿದ್ದಾರೆ. ಸರ್ಕಾರ ಹೊರಡಿಸಿದ ನಿರ್ಬಂಧದ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಹೇಳಿಕೆ ನೀಡಿದ್ದಾರೆ.
ಟ್ವಿಟರ್‌ನ ಅರ್ಜಿಯು ವಿಚಾರಣೆಗೆ ಅರ್ಹವಲ್ಲ ಎಂದು ತೀರ್ಪು ನೀಡಿದ ನ್ಯಾಯಾಲಯ, ಟ್ವಿಟರ್ಗೆ 50 ಲಕ್ಷ ರೂಪಾಯಿ ದಂಡ ವಿಧಿಸಿದೆ. "ಎಲ್ಲಾ ಪ್ಲಾಟ್‌ಫಾರ್ಮ್‌ಗಳು ಭಾರತೀಯ ಕಾನೂನಿನಂತೆ ಕೆಲಸ ಮಾಡಬೇಕು, ಆದರೆ ಜಾಕ್ ಡೋರ್ಸೆ ಅವರ ಅಡಿಯಲ್ಲಿ ಟ್ವಿಟರ್ ಹಾಗೆ ಮಾಡಲು ಪದೇ ಪದೆ ನಿರಾಕರಿಸಿತ್ತು" ಎಂದು ಸಚಿವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಅವ್ಯವಹಾರದ ಕಾರಣಕ್ಕಾಗಿ ಸರ್ಕಾರ ನೀಡಿದ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ, ಟ್ವಿಟರ್ ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋಗಿತ್ತು.
“ನಿಮ್ಮ ಕ್ಲೈಂಟ್‌ಗೆ (ಟ್ವಿಟ್ಟರ್) ನೋಟಿಸ್ ನೀಡಲಾಗಿದೆ, ಆದರೆ ನಿಮ್ಮ ಕ್ಲೈಂಟ್ ಕಾನೂನು ಪಾಲಿಸಲಿಲ್ಲ. ಕಾನೂನು ಭಂಗ ಮಾಡಿದರೆ 7 ವರ್ಷಗಳ ಜೈಲು ಶಿಕ್ಷೆ ಮತ್ತು ಅನಿಯಮಿತ ದಂಡ ವಿಧಿಸಲಾಗುತ್ತದೆ. ಈ ನಿಯಮವಿದ್ದರೂ ಕೂಡ ನಿಮ್ಮ ಕಕ್ಷಿದಾರರು ಕಾನೂನು ಮುರಿಯುವುದನ್ನು ನಿಲ್ಲಿಸಲಿಲ್ಲ” ಎಂದು ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿ ಸಚಿವರು ಪೋಸ್ಟ್ ಮಾಡಿದ್ದಾರೆ. "ನೀವು ರೈತರಲ್ಲ, ನೀವೊಂದು ಬಿಲಿಯನ್ ಡಾಲರ್ ಕಂಪನಿ" ಎಂದು ಪೀಠವು ತೀರ್ಪು ಪ್ರಕಟಿಸುವಾಗ ಹೇಳಿದೆ.
ಟ್ವಿಟರ್ ಅನ್ನು ದೇಶದಲ್ಲಿ ಬಂದ್ ಮಾಡುವುದಾಗಿ ಕೇಂದ್ರ ಸರ್ಕಾರ ಬೆದರಿಕೆ ಹಾಕಿತ್ತು ಎಂದು ಈ ತಿಂಗಳ ಆರಂಭದಲ್ಲಿ ಟ್ವಿಟರ್‌ನ ಮಾಜಿ ಸಿಇಒ ಡಾರ್ಸೆ ಅವರು ಯೂಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ಆರೋಪಿಸಿದ್ದರು. ಡಾರ್ಸೆ ಅವರ ಆರೋಪ ಕಪೋಲ ಕಲ್ಪಿತ ಎಂದು ಸಚಿವ ಚಂದ್ರಶೇಖರ್ ತಿರುಗೇಟು ನೀಡಿದ್ದರು. ಕೇಂದ್ರ ಸರ್ಕಾರವು ಟ್ವಿಟರ್ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ನಡೆಸಿದೆ ಎಂದು ಕೂಡ ಡಾರ್ಸೆ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಚಿವರು, ಇದು ಟ್ವಿಟರ್ ಇತಿಹಾಸದ ಅತ್ಯಂತ ಸಂಶಯಾಸ್ಪದ ಅವಧಿಯನ್ನು ಮುಚ್ಚಿಹಾಕುವ ಪ್ರಯತ್ನವಾಗಿದೆ ಎಂದಿದ್ದರು.
ವಾಸ್ತವವಾಗಿ ಟ್ವಿಟರ್ 2020 ರಿಂದ 2022 ರವರೆಗೆ ಸತತವಾಗಿ ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿತ್ತು ಮತ್ತು ಅಂತಿಮವಾಗಿ ಜೂನ್ 2022 ರ ಹೊತ್ತಿಗೆ ಅವರು ಸಂಪೂರ್ಣವಾಗಿ ಕಾನೂನು ಪಾಲಿಸಲಾರಂಭಿಸಿದರು. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಇಂಟರ್ನೆಟ್ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಕಾನೂನುಗಳನ್ನು ಅನುಸರಿಸಬೇಕು ಎಂದು ಅವರು ಹೇಳಿದರು.
ಟ್ವಿಟರ್ ಇದು 2006 ರಲ್ಲಿ ಪ್ರಾರಂಭವಾದ ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್ ಆಗಿದೆ. ಇದು ಇಂದು ಲಭ್ಯವಿರುವ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. 100 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರಿದ್ದು, 500 ಮಿಲಿಯನ್ ಟ್ವೀಟ್‌ಗಳನ್ನು ಪ್ರತಿದಿನ ಕಳುಹಿಸಲಾಗುತ್ತದೆ.
ಇದನ್ನೂ ಓದಿ : ಬಿಂಗ್, ಎಡ್ಜ್ ಬ್ರೌಸರ್ನಲ್ಲಿ AI ಶಾಪಿಂಗ್ ಟೂಲ್ಸ್: ಶಾಪಿಂಗ್ ಆಗಲಿದೆ ಸ್ಮಾರ್ಟ್!