ಭುವನೇಶ್ವರ(ಒಡಿಶಾ): ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತಕ್ಕೆ ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳು ಕೋಮು ಬಣ್ಣವನ್ನು ನೀಡುತ್ತಿವೆ ಎಂದು ರಾಜ್ಯ ಪೊಲೀಸರು ಕಳವಳ ವ್ಯಕ್ಯಪಡಿಸಿದ್ದಾರೆ.
"ಶುಕ್ರವಾರ ಸಂಜೆ 2 ಪ್ಯಾಸೆಂಜರ್ ರೈಲುಗಳು ಮತ್ತು ಒಂದು ಗೂಡ್ಸ್ ರೈಲು ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಬಾಲಸೋರ್‌ನಲ್ಲಿ ಸಂಭವಿಸಿದ ಈ ರೈಲು ಅಪಘಾತಕ್ಕೆ ದುರುದ್ದೇಶಪೂರಿತವಾಗಿ ಕೋಮುವಾದದ ಬಣ್ಣವನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಅತ್ಯಂತ ದುರದೃಷ್ಟಕರ" ಎಂದು ಒಡಿಶಾ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಾಲಸೋರ್ ಅಪಘಾತದ ಬಗ್ಗೆ ಇಂತಹ "ದುರುದ್ದೇಶಪೂರಿತ ಪೋಸ್ಟ್‌ಗಳನ್ನು" ಹಂಚಿಕೊಳ್ಳದಂತೆ ಅವರು ಮನವಿ ಮಾಡಿದ್ದಾರೆ.
ಕಠಿಣ ಕಾನೂನು ಕ್ರಮ:ಸುಳ್ಳು ಮತ್ತು ದುರುದ್ದೇಶಪೂರಿತ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಸಮುದಾಯಗಳನ್ನು ಪರಸ್ಪರ ವಿರುದ್ಧವಾಗಿ ಪ್ರಚೋದಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. "ಇಂತಹ ಸುಳ್ಳು ಮತ್ತು ದುರುದ್ದೇಶಪೂರಿತ ಪೋಸ್ಟ್‌ಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ನಾವು ಸಂಬಂಧಪಟ್ಟ ಎಲ್ಲರಿಗೂ ಮನವಿ ಮಾಡುತ್ತೇವೆ. ವದಂತಿಗಳನ್ನು ಹರಡುವ ಮೂಲಕ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕ್ರಮಕೈಗೊಳ್ಳಲಾಗುವುದು. ಅಪಘಾತದ ಕಾರಣ ಮತ್ತು ಇತರ ಎಲ್ಲ ಅಂಶಗಳ ಬಗ್ಗೆ ಒಡಿಶಾದ ಸರ್ಕಾರಿ ರೈಲ್ವೆ ಪೊಲೀಸ್ ಜಿಆರ್‌ಪಿಯಿಂದ ತನಿಖೆ ನಡೆಯುತ್ತಿದೆ " ಎಂದು ರಾಜ್ಯ ಪೊಲೀಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇಂಟರ್‌ಲಾಕಿಂಗ್‌ನಲ್ಲಿನ ಬದಲಾವಣೆಯಿಂದ ಅಪಘಾತ:ಶುಕ್ರವಾರ ನಡೆದ ತ್ರಿವಳಿ ರೈಲು ಅಪಘಾತದಲ್ಲಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಬಾಲಸೋರ್‌ನ ಬಹನಾಗಾ ಬಜಾರ್ ನಿಲ್ದಾಣದಲ್ಲಿ ಮೂರು ಪ್ರತ್ಯೇಕ ಹಳಿಗಳಲ್ಲಿ ಅಪಘಾತಕ್ಕೀಡಾಗಿದ್ದವು.ಭಾನುವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು "ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ನಲ್ಲಿನ ಬದಲಾವಣೆಯಿಂದ" ಅಪಘಾತ ಸಂಭವಿಸಿದೆ ಎಂದು ಹೇಳಿದರು.
ಇಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಎನ್ನುವುದು ಸಿಗ್ನಲ್ ಉಪಕರಣದ ಒಂದು ವ್ಯವಸ್ಥೆಯಾಗಿದ್ದು ಅದು ಹಳಿಗಳ ಜೋಡಣೆಯ ಮೂಲಕ ರೈಲುಗಳ ನಡುವೆ ಸಂಘರ್ಷದ ಚಲನೆಯನ್ನು ತಡೆಯುತ್ತದೆ. ಅಸಮರ್ಪಕ ಅನುಕ್ರಮದಲ್ಲಿ ಸಂಕೇತಗಳನ್ನು ಬದಲಾಯಿಸುವುದನ್ನು ತಡೆಯಲು ಇದು ಮೂಲಭೂತವಾಗಿ ಸುರಕ್ಷತಾ ಕ್ರಮವಾಗಿದೆ. ಮಾರ್ಗವು ಸುರಕ್ಷಿತವೆಂದು ಸಾಬೀತುಪಡಿಸದ ಹೊರತು ಯಾವುದೇ ರೈಲು ಮುಂದುವರಿಯಲು ಸಂಕೇತವನ್ನು ಪಡೆಯುವುದಿಲ್ಲ ಎಂಬುದು ಈ ವ್ಯವಸ್ಥೆಯ ಗುರಿಯಾಗಿದೆ.