ಲಾಹೌಲ್/ಸ್ಪಿತಿ (ಹಿಮಾಚಲ ಪ್ರದೇಶ):ಇಲ್ಲಿನ ಎರಡು ಜಿಲ್ಲೆಗಳಲ್ಲಿ ಕಳೆದ 2 ದಿನದಿಂದ ಹಿಮಾಪಾತ ಆಗುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಹಿಮಪಾತಕ್ಕೆ ಜನರಿಗೆ ಹೊರಗೆ ಓಡಾಡಲು ಆಗ ಸ್ಥಿತಿ ನಿರ್ಮಾಣವಾಗಿದೆ. ಎರಡು ಅಡಿಗೂ ಹೆಚ್ಚು ಹಿಮಮಳೆ ಉಂಟಾಗುತ್ತಿರುವುದರಿಂದ ರಸ್ತೆ ಸಂಚಾರವೂ ಸಮಸ್ಯೆಯಾಗಿದೆ. ಈ ನಡುವೆ ಶಾಲಾ ವಿದ್ಯಾರ್ಥಿಗಳ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಮಕ್ಕಳ ಶಿಕ್ಷಣದ ಆಸ್ತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಜಿಲ್ಲೆಯ ಕಾಜಾ ಉಪವಿಭಾಗದ ಅಧಿಕಾರಿ ಮಾತನಾಡಿ, ಇಲ್ಲಿಯೂ 2 ಅಡಿಗೂ ಹೆಚ್ಚು ಹಿಮಪಾತವಾಗಿದೆ. ಇದರಿಂದಾಗಿ ಕಣಿವೆಯ ಜನಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಜನರು ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಮಕ್ಕಳು ಶಾಲೆಗೆ ಹೋಗುತ್ತಿರುವ ವಿಡಿಯೋ ವೈರಲ್ ಆಗಿದ್ದು, ನಮ್ಮೆಲ್ಲರಿಗೂ ಇನ್ನಷ್ಟು ಕೆಲಸ ಮಾಡಲು ಉತ್ಸಾಹ ಹೆಚ್ಚಿಸಿದೆ. ವಿಡಿಯೋದಲ್ಲಿ ಕಾಜಾ ಶಾಲೆಯ ವಿದ್ಯಾರ್ಥಿನಿಯರು ಭಾರೀ ಹಿಮಪಾತದ ನಡುವೆಯೂ ಕಾಲ್ನಡಿಗೆಯಲ್ಲೇ ಶಾಲೆಗೆ ಹೊಗುತ್ತಿದ್ದಾರೆ. ಹಿಮಪಾತದಿಂದ ಬಹುತೇಕರು ಮನೆಯಲ್ಲೇ ಕುಳಿತಿರುವಾಗ ವಿದ್ಯಾರ್ಥಿನಿಯರಿಗೆ ಶಿಕ್ಷಣದ ಬಗ್ಗೆ ಇರುವ ಉತ್ಸಾಹ ಕಡಿಮೆ ಆಗದೇ, ಹಿಮಪಾತದ ನಡುವೆ ವಿದ್ಯಾರ್ಥಿನಿಯರು ಕಾಲ್ನಡಿಗೆಯಲ್ಲಿ ಶಾಲೆ ತಲುಪಿದ್ದಾರೆ ಎಂದು ತಿಳಿಸಿದ್ದಾರೆ.
ಹಿಮಪಾತ ಮೀರಿಸಿದ ವಿದ್ಯಾರ್ಥಿನಿಯರ ಆಸ್ತೆ:ಕಾಜಾ ಶಾಲೆಯ ವಿದ್ಯಾರ್ಥಿನಿಯರು ಹಿಮದ ನಡುವೆ ಶಾಲೆಗೆ ಹೊಗುತ್ತಿರುವ ವಿಡಿಯೋವನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರೊಪೈಲ್ನಲ್ಲಿ ಸಹಾಯಕ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಜಯ್ ಬನ್ಯಾಲ್ ಎಂಬುವವರು ಪೋಸ್ಟ್ ಮಾಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೀಡಿಯೋದಲ್ಲಿ ಹಿಮಪಾತದ ನಡುವೆಯೂ ವಿದ್ಯಾರ್ಥಿನಿಯರು ಕಾಲ್ನಡಿಗೆಯಲ್ಲೇ ಶಾಲೆಗೆ ತೆರಳುತ್ತಿದ್ದಾರೆ. ಕಾಜಾ ಉಪವಿಭಾಗದಲ್ಲಿ ಬಾಲಕಿಯರ ಏಕೈಕ ಸರ್ಕಾರಿ ಹಾಸ್ಟೆಲ್ನಿಂದ ವಿದ್ಯಾರ್ಥಿನಿಯರು ಶಾಲೆಗೆ ತೆರಳುತ್ತಿರುವ ವಿಡೀಯೋ ಇದಾಗಿದೆ. ಕಾಜಾ ಉಪವಿಭಾಗದ ವಿವಿಧ ಪ್ರದೇಶಗಳ 60 ವಿದ್ಯಾರ್ಥಿನಿಯರು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳು ಶಾಲೆಗೆ ಸಾಲಾಗಿ ತೆರಳುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಹಿಮಪಾತವಾದರೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಉತ್ಸಾಹ ಕಡಿಮೆಯಾಗಿಲ್ಲ ಎಂದು ಹೆಚ್ಚಿನವರು ಕಮೆಂಟ್ ಮಾಡುತ್ತಿದ್ದಾರೆ.