ಶ್ರೀನಗರ/ಶಿಮ್ಲಾ: ಉತ್ತರ ಭಾರತದಲ್ಲಿ ಹೆಪ್ಪುಗಟ್ಟುವ ಚಳಿ ಮುಂದುವರೆದಿದೆ. ಇದರ ನಡುವೆ ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಲಚ ಪ್ರದೇಶದಲ್ಲಿ ಭಾರಿ ಹಿಮಪಾತ ಸಂಭವಿಸುತ್ತಿದೆ. ಕಾಶ್ಮೀರ ಕಣಿವೆಯಲ್ಲಿ ಹಿಮಪಾತದ ನಡುವೆ ಕೆಟ್ಟ ಹವಾಮಾನದ ಕಾರಣದಿಂದಾಗಿ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಶುಕ್ರವಾರ 25 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಲಚ ಪ್ರದೇಶ ಎರಡೂ ರಾಜ್ಯಗಳಲ್ಲೂ ಇಂದು ಈ ಋತುವಿನ ಮೊದಲ ಹಿಮಪಾತ ಇದಾಗಿದೆ. ನಿರಂತರವಾಗಿ ಹಿಮಪಾತದಿಂದ ಹಲವು ಪ್ರದೇಶಗಳು ಆವೃತವಾಗುತ್ತಿವೆ. ಇದರ ಜೊತೆ ಕಡಿಮೆ ಗೋಚರತೆ ಉಂಟಾಗುತ್ತಿದೆ. ಹೀಗಾಗಿ ವಿಮಾನ ಹಾರಾಟ, ವಾಹನ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶ್ರೀನಗರ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ 10ರಿಂದಲೇ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಕೆಟ್ಟ ಹವಾಮಾನದ ಕಾರಣ ವಿಮಾನಯಾನ ಸಂಸ್ಥೆಗಳು ಇಂದು ಬೆಳಗ್ಗೆ 10 ಗಂಟೆ ನಂತರದ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿವೆ. ಏರ್ ಏಷ್ಯಾ, ಇಂಡಿಗೋ, ಸ್ಪೈಸ್ ಜೆಟ್, ಏರ್ ಇಂಡಿಯಾ ಮತ್ತು ವಿಸ್ತಾರಾ ಸಂಸ್ಥೆ ಸೇರಿದಂತೆ 25 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಇತ್ತ, ರಾಂಬನ್ ಜಿಲ್ಲೆಯ ಮೆಹರ್ ಪ್ರದೇಶದಲ್ಲಿ ಭೂಕುಸಿತದಿಂದಾಗಿ ಶ್ರೀನಗರ ಮತ್ತು ಜಮ್ಮು ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ತಾಜಾ ಹಿಮಪಾತದಿಂದ ದಿನ ಆರಂಭ: ಕಾಶ್ಮೀರ ಕಣಿವೆಯಲ್ಲಿ ತಾಜಾ ಹಿಮಪಾತದಿಂದ ದಿನ ಆರಂಭವಾಗಿದೆ. ಜನರ ನಿದ್ದೆ ಎಚ್ಚರಗೊಳ್ಳುವರಷ್ಟರಲ್ಲಿ ಅನೇಕ ಪ್ರದೇಶಗಳು ಹಿಮದಿಂದ ಆವೃತಗೊಂಡಿದ್ದವು. ಮಧ್ಯಾಹ್ನದವರೆಗೆ ಕಣಿವೆ ನಾಡು ಹಿಮದ ಹೊದಿಕೆಯಿಂದ ಮುಚ್ಚಲ್ಪಟ್ಟಿತ್ತು. ಇದೇ ವೇಳೆ, ತಾಜಾ ಹಿಮಪಾತವು ಅತಿ ಎತ್ತರದ ಪ್ರವಾಸಿ ತಾಣಗಳಾದ ಗುಲ್ಮಾರ್ ಮತ್ತು ಸೋನ್ಮಾರ್ಗ್‌ನಲ್ಲಿ ಪ್ರವಾಸಿಗರು ಮತ್ತು ಹೋಟೆಲ್ ಮಾಲೀಕರಿಗೆ ಹೊಸ ಆನಂದ ನೀಡಿದೆ. ಈ ಋತುವಿನ ಮೊದಲ ಹಿಮಪಾತಕ್ಕೆ ಪ್ರವಾಸಿಗರು ಸಾಕ್ಷಿಯಾದರೆ, ಹೋಟೆಲ್ ವ್ಯಾಪಾರವು ಬಿರುಸಿನಿಂದ ಸಾಗಿತ್ತು. ಮತ್ತೊಂದೆಡೆ ಯೋಧರು ಭಾರೀ ಹಿಮದ ನಡುವೆಯೇ ಗಸ್ತು ತಿರುಗುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.