ಚಿತ್ತೂರು(ಆಂಧ್ರ ಪ್ರದೇಶ): ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದಲ್ಲಿ ಒಂದು ಹಾಡಿದೆ. ಆ ಹಾಡಿನಲ್ಲಿ ಹಾವಿನ ದ್ವೇಷ ಹನ್ನೆರಡು ವರ್ಷ ಅನ್ನೋದು ಮೊದಲ ಸಾಲು. ಹಾವು ನಿಜಕ್ಕೂ ಸೇಡು ತೀರಿಸಿಕೊಳ್ಳುತ್ತಾ..? ದ್ವೇಷ ಸಾಧಿಸಿ, ಬೆನ್ನಟ್ಟಿ ಬೇಟೆಯಾಡುತ್ತಾ? ಈ ಪ್ರಶ್ನೆಗಳಿಗೆ 'ಇಲ್ಲ' ಎಂಬ ಉತ್ತರ ಸಾಮಾನ್ಯ ಉತ್ತರವನ್ನು ಎಲ್ಲರೂ ನೀಡಬಹುದು. ಆದರೆ ಇಲ್ಲೊಂದು ಘಟನೆ 'ಇಲ್ಲ' ಎಂಬ ಉತ್ತರವನ್ನು ಅನುಮಾನದಿಂದ ನೋಡುವಂತೆ ಮಾಡಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ವಲಯದಲ್ಲಿ ಕುಟುಂಬವೊಂದರ ಮೇಲೆ ಹಾವು ಹಗೆ ಸಾಧಿಸುತ್ತಿದೆ ಎನ್ನಲಾಗುತ್ತಿದೆ. ಒಂದು ತಿಂಗಳ ಅವಧಿಯಲ್ಲಿ ಒಂದೇ ಕುಟುಂಬದ ಮೂವರನ್ನು ಎರಡೆರಡು ಬಾರಿ ಹಾವು ಕಚ್ಚಿದ್ದು, ಸ್ಥಳೀಯರು ಸಕಾಲಕ್ಕೆ ಸಹಾಯಕ್ಕೆ ಧಾವಿಸಿದ ಕಾರಣದಿಂದಾಗಿ ಎಲ್ಲರೂ ಬದುಕುಳಿದಿದ್ದಾರೆ.
ಡೋರ್ನಕಂಬಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವೆಂಕಟೇಶ್ ಮತ್ತು ವೆಂಕಟಮ್ಮ ದಂಪತಿ ತಮ್ಮ ಪುತ್ರನಾದ ಜಗದೀಶ್ ಎಂಬಾತನೊಂದಿಗೆ ಕೃಷಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕಳೆದ ತಿಂಗಳು ಈ ಎಲ್ಲರಿಗೂ ಹಾವು ಕಚ್ಚಿತ್ತು. ಸ್ಥಳೀಯರು 108 ನಂಬರ್ಗೆ ಕರೆ ಮಾಡಿ, ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರು. ಎರಡು ದಿನಗಳ ಹಿಂದೆ ಅವರು ಡಿಸ್ಚಾರ್ಜ್ ಆಗಿ ಬಂದಿದ್ದು, ವೆಂಕಟಮ್ಮ ಮತ್ತು ಜಗದೀಶ್ ಅವರನ್ನು ಸೋಮವಾರ ಮತ್ತೆ ಹಾವು ಕಚ್ಚಿದೆ. ಮತ್ತೆ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೂ ಮುನ್ನ ವೆಂಕಟೇಶ್ ಅವರನ್ನು ಹಾವು ಕಚ್ಚಿತ್ತು ಎನ್ನಲಾಗಿದೆ.
ಹಾವುಗಳ ಕಾರಣದಿಂದಾಗಿ ಈ ಕುಟುಂಬ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈಗ ತಿರುಪತಿಯ ರುವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಹಾವಿನ ಕಿರುಕುಳದಿಂದ ತಮಗೆ ಮುಕ್ತಿ ದೊರಕಿಸಿ ಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಥಳೀಯರೂ ದನಿಗೂಡಿಸಿದ್ದಾರೆ.
ಇದನ್ನೂ ಓದಿ:ಮೀನು ಹಿಡಿಯಲು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು