ಬುಂಡಿ(ರಾಜಸ್ಥಾನ):ವಿಷಪೂರಿತ ಹಾವೊಂದು ಒಂದೇ ಕುಟುಂಬದ ನಾಲ್ವರಿಗೆ ಕಚ್ಚಿರುವ ಪರಿಣಾಮ ಮಹಿಳೆ ಸಾವನ್ನಪ್ಪಿದ್ದು, ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದೆ. ಈ ಘಟನೆ ರಾಜಸ್ಥಾನದ ಬುಂಡಿಯಲ್ಲಿ ನಡೆದಿದ್ದು, ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಕಳೆದ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ತಾಯಿ ತನ್ನ ಮೂವರು ಮಕ್ಕಳೊಂದಿಗೆ ಒಂದೇ ರೂಂನಲ್ಲಿ ಮಲಗಿದ್ದಳು. ಈ ವೇಳೆ ಎಲ್ಲರಿಗೂ ಹಾವು ಕಚ್ಚಿದೆ. ಹಾವು ಕಚ್ಚಿದೆ ಎಂಬುದು ಯಾರಿಗೂ ಗೊತ್ತಾಗಿಲ್ಲ. ಆದರೆ ಕೆಲ ನಿಮಿಷಗಳ ಬಳಿಕ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದು, ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ವೇಳೆ Food Poisoning ಆಗಿರಬಹುದು ಎಂದು ಶಂಕಿಸಿ, ಚಿಕಿತ್ಸೆ ನೀಡಿದ್ದಾರೆ. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಈ ವೇಳೆ ಹಾವು ಕಡಿತದ ಬಗ್ಗೆ ಅವರಿಗೆ ಪರೀಕ್ಷೆ ನಡೆಸಲಾಗಿದ್ದು, ಅದು ದೃಢಗೊಂಡಿದೆ.