ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಸ್ಕೂಟಿ ಸವಾರಿ ಮಾಡುತ್ತಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 'ಸಹ ಸಚಿವೆ ಭಾರತಿ ಪವಾರ್ ಅವರನ್ನು ಕಚೇರಿಗೆ ತಲುಪಿಸುವ ಮಹತ್ವದ ಸಮಯ ನನ್ನದು' ಎಂದು ಬರೆದುಕೊಂಡಿದ್ದಾರೆ. ಇನ್ಸ್ಟಾದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ತಿರಂಗ ಯಾತ್ರೆಯೊಂದಿಗೆ ಈ ದಿನ ಸಚಿವೆಯನ್ನು ಕಚೇರಿಗೆ ಬಿಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ವಿಡಿಯೋದಲ್ಲಿ ಇರಾನಿ ಹೂವಿನ ಚಿತ್ರವಿರುವ ಕೆಂಪು ಸೀರೆ ಧರಿಸಿದ್ದಾರೆ. ಆರೋಗ್ಯ ಖಾತೆ ರಾಜ್ಯ ಸಚಿವೆ ಪವಾರ್ ಅವರು ಸ್ಕೂಟಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದಿದ್ದಾರೆ. ಇನ್ನೊಂದು ರಾಷ್ಟ್ರಧ್ವಜವನ್ನು ವಾಹನದ ಹಿಂದಕ್ಕೆ ಕಟ್ಟಿರುವುದನ್ನು ಕಾಣಬಹುದು.
ಕೇಂದ್ರ ಸರ್ಕಾರ ಮತ್ತು ಬಿಜೆಪಿ 'ಹರ್ ಘರ್ ತಿರಂಗ' ಅಭಿಯಾನ ನಡೆಸುವ ಮೂಲಕ 75 ನೇ ಸ್ವಾತಂತ್ರ್ಯೋತ್ಸವಕ್ಕೆ ಸಜ್ಜಾಗಿದೆ. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಪಿಯೂಷ್ ಗೋಯಲ್ ಅವರೊಂದಿಗೆ ಮಂಗಳವಾರ ಕೆಂಪುಕೋಟೆಯಿಂದ ಸಂಸದರ ತಿರಂಗಾ ಬೈಕ್ ರ್ಯಾಲಿಗೆ ಚಾಲನೆ ನೀಡಿದ್ದಾರೆ. ಈ ರ್ಯಾಲಿಯಲ್ಲಿ ಮಾತನಾಡಿದ್ದ ಇರಾನಿ, ಭಾರತ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸುತ್ತಿರುವುದನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಸಂಭ್ರಮಿಸುತ್ತಿದ್ದಾರೆ. ಮುಂದಿನ 25 ವರ್ಷಗಳು ಸಂಕಲ್ಪಗಳಿಂದ ತುಂಬಿರಬೇಕು, ಕರ್ತವ್ಯಗಳಿಂದ ತುಂಬಿರಬೇಕು ಮತ್ತು ಪ್ರತಿಯೊಬ್ಬ ಭಾರತೀಯನೂ ನಿರೀಕ್ಷೆಗೆ ತಕ್ಕಂತೆ ಬದುಕಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪ ಎಂದಿದ್ದಾರೆ.