ನವ ದೆಹಲಿ: ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಸದನದ ಕಲಾಪ ಶುಕ್ರವಾರ ಪುನರಾರಂಭವಾಗುತ್ತಿದ್ದಂತೆ, ಬಿಜೆಪಿ ಕೌನ್ಸಿಲರ್‌ಗಳು ಘೋಷಣೆ ಕೂಗಲು ಪ್ರಾರಂಭಿಸಿದರು. ಎಂಸಿಡಿ ಸ್ಥಾಯಿ ಸಮಿತಿಯ ಆರು ಸದಸ್ಯರ ಆಯ್ಕೆ ಇಂದು ಎಂಸಿಡಿ ಭವನದಲ್ಲಿ ನಡೆಯುತ್ತಿದೆ. ಮೇಯರ್ ಚುನಾವಣೆಯಂತೆಯೇ ಸ್ಥಾಯಿ ಸಮಿತಿ ಚುನಾವಣೆಯಲ್ಲೂ ಗೆಲ್ಲುವ ವಿಶ್ವಾಸವಿದೆ ಎಎಪಿಯ ಶಾಸಕ ಸೌರಭ್ ಭಾರದ್ವಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಎಪಿ ಮತ್ತು ಬಿಜೆಪಿ ಕೌನ್ಸಿಲರ್‌ಗಳ ನಡುವಿನ ಘರ್ಷಣೆಯಿಂದ ಉಂಟಾದ ಸುದೀರ್ಘ ಕೋಲಾಹಲದ ನಂತರ ಎಂಸಿಡಿ ಸದನವನ್ನು ಮುಂದೂಡಿದ ಒಂದು ದಿನದ ನಂತರ ಮತ್ತೆ ಸಭೆ ಸೇರಲಾಗಿದೆ. ದೆಹಲಿಯ ಮಹಾನಗರ ಪಾಲಿಕೆಯ (ಎಂಸಿಡಿ) ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಸುವ ಪ್ರಕ್ರಿಯೆ ಬುಧವಾರ ಸಂಜೆ 6.15ರ ಸುಮಾರಿಗೆ ಪ್ರಾರಂಭವಾಗಿತ್ತು. ಸದಸ್ಯರ ಪ್ರತಿಭಟನೆ, ಹೈ-ವೋಲ್ಟೇಜ್ ಡ್ರಾಮಾದ ನಡುವೆ ಸದನವನ್ನು ಮುಂದೂಡಲಾಗಿತ್ತು. ಬುಧವಾರ ರಾತ್ರಿ ಬಿಜೆಪಿ ಮತ್ತು ಎಎಪಿಯ ಹಲವಾರು ಸದಸ್ಯರು ಎಂಸಿಡಿ ಹೌಸ್‌ನ ಚೇಂಬರ್‌ನಲ್ಲಿ ಪರಸ್ಪರ ಹೊಡೆದುಕೊಂಡು ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆದುಕೊಂಡಿದ್ದರು. ಗುರುವಾರ ಬೆಳಗ್ಗೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಚುನಾವಣೆಯ ಸ್ಥಗಿತಗೊಂಡಿತ್ತು.
ಬಿಜೆಪಿ ಸೇರಿದ ಎಎಪಿ ಕೌನ್ಸಿಲರ್:ಇಂದು ಎಂಸಿಡಿ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಗೆ ನಿರ್ಣಾಯಕ ಮತದಾನಕ್ಕೆ ಮುಂಚಿತವಾಗಿ ಆಮ್ ಆದ್ಮಿ ಪಕ್ಷದ (AAP) ಕೌನ್ಸಿಲರ್ ಪವನ್ ಸೆಹ್ರಾವತ್ ಅವರು ಕೇಸರಿ ಪಕ್ಷಕ್ಕೆ ಸೇರಿದ್ದಾರೆ ಎಂದು ಬಿಜೆಪಿ ಘೋಷಿಸಿದೆ. ಕಾರ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಮತ್ತು ಪ್ರಧಾನ ಕಾರ್ಯದರ್ಶಿ ಹರ್ಷ್ ಮಲ್ಹೋತ್ರಾ ಅವರು ಪಕ್ಷದ ದೆಹಲಿ ಘಟಕದ ಕಚೇರಿಯಲ್ಲಿ ಶ್ರೀ ಸೆಹ್ರಾವತ್ ಅವರನ್ನು ಸ್ವಾಗತಿಸಿದರು. ಅಲ್ಲಿ ಇತರ ದೆಹಲಿ ಬಿಜೆಪಿ ನಾಯಕರು ಉಪಸ್ಥಿತರಿದ್ದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷದಲ್ಲಿನ ಭ್ರಷ್ಟಾಚಾರದಿಂದಾಗಿ ಉಸಿರುಗಟ್ಟುವಿಕೆಯ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೇ ಎಂಸಿಡಿ ಹೌಸ್ ಸಭೆಯಲ್ಲಿ ಗದ್ದಲ ಎಬ್ಬಿಸುವಂತೆ ಎಎಪಿ ಕೌನ್ಸಿಲರ್‌ಗಳಿಗೆ ಸೂಚನೆ ನೀಡಲಾಗಿತ್ತು. ಇದರಿಂದ ನಾನು ನೊಂದಿದ್ದೇನೆ ಎಂದು ಸೆಹ್ರಾವತ್ ಆರೋಪಿಸಿದ್ದಾರೆ.