ಚೆನ್ನೈ(ತಮಿಳುನಾಡು): ಗುರುವಾರ ನಿಧನರಾದ ಖ್ಯಾತ ತಮಿಳು ನಟ, ರಾಜಕಾರಣಿ ವಿಜಯಕಾಂತ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ಅಹಿತಕರ ಘಟನೆ ವರದಿಯಾಗಿದೆ. ನಟ ದಳಪತಿ ವಿಜಯ್ ಅವರತ್ತ ವ್ಯಕ್ತಿಯೊಬ್ಬ ಚಪ್ಪಲಿ ಎಸೆದಿದ್ದಾನೆ ಎನ್ನಲಾಗಿದೆ. ಈ ಘಟನೆಯ ವಿಡಿಯೋ ತುಣಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
71 ವರ್ಷದ ವಯಸ್ಸಿನ ವಿಜಯಕಾಂತ್ ಅನಾರೋಗ್ಯದಿಂದ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದರು. ರಾತ್ರಿ 10.30ರ ಸುಮಾರಿಗೆ ದಳಪತಿ ವಿಜಯ್ ಸಹ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ಗೌರವ ಸಲ್ಲಿಸಿದ್ದರು. ದಿವಂಗತ ರಾಜಕಾರಣಿಯ ಪತ್ನಿ ಪ್ರೇಮಲತಾ ವಿಜಯಕಾಂತ್ ಅವರಿಗೆ ಸಾಂತ್ವನ ಹೇಳಿ ಅಲ್ಲಿಂದ ತೆರಳಿದ್ದರು.
ಇದನ್ನೂ ಓದಿ:ಕೋವಿಡ್ನಿಂದ ಬಳಲುತ್ತಿದ್ದ ಹಿರಿಯ ನಟ, ಡಿಎಂಡಿಕೆ ನಾಯಕ ವಿಜಯಕಾಂತ್ ವಿಧಿವಶ
ಇದಾದ ಬಳಿಕ ಜನಸಂದಣಿಯ ನಡುವೆ ತಮ್ಮ ಕಾರು ಹತ್ತಲು ಯತ್ನಿಸಿದ ವಿಜಯ್ ಅವರತ್ತ ಅಪರಿಚಿತ ವ್ಯಕ್ತಿಯೊಬ್ಬ ಚಪ್ಪಲಿ ಎಸೆದಿದ್ದಾನೆ ಎಂದು ಹೇಳಲಾಗಿದೆ. ಇದರ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ಘಟನೆಗೆ ಸಂಬಂಧ ವಿಡಿಯೋ ತುಣುಕು ಕೂಡ ವೈರಲ್ ಆಗಿದೆ. ಇದರಲ್ಲಿ ವಿಜಯ್ ಕಡೆಗೆ ಚಪ್ಪಲಿ ತೂರಿ ಬರುತ್ತಿರುವುದು ಹಾಗೂ ಅದನ್ನು ವ್ಯಕ್ತಿಯೊಬ್ಬರು ತಡೆದಿರುವುದನ್ನು ಕಾಣಬಹುದು. ಮತ್ತೊಂದೆಡೆ, ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ವಿಜಯ್ ಬೆಂಬಲಿಗರು ಮಾತ್ರವಲ್ಲದೆ ವಿವಿಧ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ಕಚೇರಿ ಆವರಣದಲ್ಲಿ ಅಂತ್ಯ ಸಂಸ್ಕಾರ-72 ಗನ್ ಸೆಲ್ಯೂಟ್ ಗೌರವ:ಇಂದು ಸಂಜೆ ವಿಜಯಕಾಂತ್ ಅವರ ಅಂತ್ಯಕ್ರಿಯೆಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಚೆನ್ನೈನ ಕೊಯಂಬೆಡುವಿನಲ್ಲಿರುವ ಡಿಎಂಡಿಕೆ ಪಕ್ಷದ ಪ್ರಧಾನ ಕಚೇರಿ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. 72 ಗನ್ ಸೆಲ್ಯೂಟ್‌ನೊಂದಿಗೆ ಅಂತಿಮ ಗೌರವ ಸಲ್ಲಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು, ಡಿಎಂಡಿಕೆ ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡು ಅಶ್ರುತರ್ಪಣ ಸಲ್ಲಿಸಿದರು.