ಕರ್ನಾಟಕ

karnataka

ETV Bharat / bharat

ಸ್ವಪಕ್ಷದ ವಿರುದ್ಧ ವಾಗ್ದಾಳಿ, ಮಮತಾ ಭೇಟಿ: ಚಾಣಾಕ್ಷ ಸುಬ್ರಮಣಿಯನ್ ಸ್ವಾಮಿ ನಡೆಯೇನು? - ಬಿಜೆಪಿ ವಿರುದ್ಧ ಸುಬ್ರಮಣಿಯನ್ ಸ್ವಾಮಿ

ಸದ್ಯ ಬಿಜೆಪಿ ನಾಯಕನಾಗಿ ಗುರುತಿಸಿಕೊಂಡಿರುವ ಸುಬ್ರಮಣಿಯನ್ ಸ್ವಾಮಿ ಸ್ವಂತ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಪಕ್ಷದಲ್ಲಿ ಆಂತರಿಕ ಚುನಾವಣೆಗಳು ನಡೆಯುತ್ತಿಲ್ಲ, ಎಲ್ಲ ಹುದ್ದೆಗಳಿಗೆ ಪ್ರಧಾನಿ ಒಪ್ಪಿಗೆ ಮೇರೆಗೆ ನಾಮನಿರ್ದೇಶನ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಸ್ವಾಮಿ ಬಿಜೆಪಿ ಬಿಡುವ ಯೋಚನೆಯಲ್ಲಿರಬಹುದು ಎಂಬ ಊಹಾಪೋಹಗಳು ಸುಳಿದಾಡುತ್ತಿವೆ.

Subramanian Swamy
Subramanian Swamy

By

Published : Aug 19, 2022, 6:02 PM IST

ನವದೆಹಲಿ: ಬಿಜೆಪಿ ಸಂಸದೀಯ ಸಮಿತಿ ಪರಿಷ್ಕರಣೆಯ ಒಂದು ದಿನದ ನಂತರ, ಪಕ್ಷದ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ತಮ್ಮದೇ ಪಕ್ಷದ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಂಘಟನಾತ್ಮಕ ಚುನಾವಣೆಗಳಿಲ್ಲದೆ ಪದಾಧಿಕಾರಿಗಳ ನೇಮಕ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಅನುಮತಿಯ ಮೇರೆಗೆ ನಾಯಕರನ್ನು ನೇಮಿಸಲಾಗುತ್ತಿದೆ ಎಂದು ಅವರು ಟೀಕೆ ಮಾಡಿದ್ದಾರೆ.

ಜನತಾ ಪಕ್ಷದ ಆರಂಭಿಕ ದಿನಗಳಲ್ಲಿ ಮತ್ತು ಆಗಿನ ಬಿಜೆಪಿಯ ದಿನಗಳಲ್ಲಿ ಪಕ್ಷ ಹಾಗೂ ಸಂಸದೀಯ ಪಕ್ಷದ ಪದಾಧಿಕಾರಿಗಳ ನೇಮಕಕ್ಕೆ ಚುನಾವಣೆಗಳು ನಡೆಯುತ್ತಿದ್ದವು. ಪಕ್ಷದ ಸಂವಿಧಾನದ ಪ್ರಕಾರ ಹಾಗೆಯೇ ನಡೆಯಬೇಕು ಕೂಡ. ಈಗಿನ ಬಿಜೆಪಿಯಲ್ಲಿ ಆಂತರಿಕ ಚುನಾವಣೆಗಳೇ ನಡೆಯುತ್ತಿಲ್ಲ. ಪ್ರತಿಯೊಂದು ಹುದ್ದೆಗೂ ಪ್ರಧಾನಿಯ ಒಪ್ಪಿಗೆಯ ಮೇರೆಗೆ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಲಾಗುತ್ತಿದೆ ಎಂದು ಸ್ವಾಮಿ ಟ್ವೀಟ್​ ಮಾಡಿದ್ದಾರೆ.

ಪಕ್ಷದ ವಿಭಿನ್ನ ಹುದ್ದೆಗಳಿಗೆ ಅಧ್ಯಕ್ಷರು ಕಾರ್ಯಕರ್ತರನ್ನು ನಾಮನಿರ್ದೇಶನ ಮಾಡುವುದು ಪಕ್ಷದೊಳಗೆ ಸಂಪ್ರದಾಯವಾಗಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತವೆ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಅಥವಾ ಸೂಕ್ತ ವ್ಯವಸ್ಥೆಯಡಿ ಈ ನೇಮಕಗಳನ್ನು ಅನುಮೋದಿಸಲಾಗುತ್ತದೆ ಎಂದು ಪಕ್ಷ ಹೇಳಿದೆ.

ಹಲವಾರು ವಿಷಯಗಳಲ್ಲಿ ಮೋದಿ ಸರ್ಕಾರದ ವಿರುದ್ಧ ದೀರ್ಘಕಾಲದಿಂದ ಟೀಕೆ ಮಾಡುತ್ತಿರುವ ಚಾಣಾಕ್ಷ ರಾಜಕಾರಣಿ ಸುಬ್ರಮಣಿಯನ್ ಸ್ವಾಮಿ, ಗುರುವಾರ ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದಾರೆ.

ಪಕ್ಷದ ಸಂಸದೀಯ ಸಮಿತಿಗೆ ನಡೆದ ಬಹುದೊಡ್ಡ ಪರಿಷ್ಕರಣೆಯಲ್ಲಿ ಬಿಜೆಪಿ, ಬುಧವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸಂಸದೀಯ ಮಂಡಳಿಯಿಂದ ಕೈಬಿಟ್ಟಿದೆ. ಕರ್ನಾಟಕದಲ್ಲಿ ಪ್ರಮುಖ ನಾಯಕ ಬಿಎಸ್ ಯಡಿಯೂರಪ್ಪ ಮತ್ತು ಮೊದಲ ಸಿಖ್ ಪ್ರತಿನಿಧಿ ಇಕ್ಬಾಲ್ ಸಿಂಗ್ ಲಾಲ್ಪುರ ಸೇರಿದಂತೆ ಆರು ಹೊಸ ಸದಸ್ಯರನ್ನು ಸಮಿತಿಗೆ ಸೇರ್ಪಡೆ ಮಾಡಿದೆ.

'ವರ್ಚಸ್ವಿ ಮತ್ತು ಧೈರ್ಯಶಾಲಿ' ಮಮತಾ ಬ್ಯಾನರ್ಜಿ: ಬಿಜೆಪಿ ನಾಯಕರ ವಿರುದ್ಧ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಸುಬ್ರಮಣಿಯನ್ ಸ್ವಾಮಿ ಗುರುವಾರ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೋಲ್ಕತಾದಲ್ಲಿ ಭೇಟಿಯಾಗಿದ್ದಾರೆ. ಈ ಬಗ್ಗೆ ಕೂಡ ಟ್ವೀಟ್ ಮಾಡಿರುವ ಅವರು, ಇಂದು ನಾನು ಕೋಲ್ಕತ್ತಾದಲ್ಲಿದ್ದು ವರ್ಚಸ್ವಿ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದೆ. ಅವರೊಬ್ಬ ಧೈರ್ಯಶಾಲಿ ವ್ಯಕ್ತಿ. ಕಮ್ಯುನಿಸ್ಟ್ ಪಕ್ಷವನ್ನು ನಾಶ ಮಾಡಿದ ಸಿಪಿಎಂ ವಿರುದ್ಧದ ಆಕೆಯ ಹೋರಾಟವನ್ನು ನಾನು ಮೆಚ್ಚಿದ್ದೇನೆ ಎಂದು ಬರೆದಿದ್ದಾರೆ.

ಉಭಯ ನಾಯಕರ ಈ ಭೇಟಿಯಿಂದ ಪ್ರಸ್ತುತ ಬಿಜೆಪಿ ಸರ್ಕಾರವನ್ನು ಟೀಕಿಸುತ್ತಿರುವ ಸ್ವಾಮಿ, ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿದೆ. ಆದರೆ, ಈ ಹಿಂದೆ ಇಂತಹ ವದಂತಿಗಳನ್ನು ಅಲ್ಲಗಳೆದಿದ್ದ ಅವರು, ಈಗಾಗಲೇ ನಾನು ಮಮತಾ ಬ್ಯಾನರ್ಜಿ ಜತೆಗಿರುವುದರಿಂದ ಟಿಎಂಸಿ ಸೇರುವ ಅಗತ್ಯವಿಲ್ಲ ಎಂದಿದ್ದರು.

2020ರಲ್ಲಿ ಕೂಡ ಸ್ವಾಮಿ ಮಮತಾ ರಾಜಕೀಯವನ್ನು ಬೆಂಬಲಿಸಿದ್ದರು. ನನ್ನ ಪ್ರಕಾರ ಮಮತಾ ಬ್ಯಾನರ್ಜಿ ಪಕ್ಕಾ ಹಿಂದೂ ಮತ್ತು ದುರ್ಗಾ ಭಕ್ತೆ. ಪ್ರತಿಯೊಂದು ಸಂದರ್ಭವನ್ನು ಆಧರಿಸಿ ಅದರಂತೆ ಅವರು ನಡೆದುಕೊಳ್ಳುತ್ತಾರೆ. ಅವರ ರಾಜಕೀಯ ವಿಭಿನ್ನವಾಗಿದೆ. ನಾವು ನೇರಾನೇರ ಹೋರಾಡುತ್ತೇವೆ ಎಂದು ಟ್ವೀಟ್ ಮಾಡಿದ್ದರು.

ಸುಬ್ರಮಣಿಯನ್ ಸ್ವಾಮಿ ಯಾವಾಗ ಯಾರ ವಿರುದ್ಧ ನಿಲ್ಲುತ್ತಾರೆ, ಯಾರನ್ನು ಬೆಂಬಲಿಸುತ್ತಾರೆ ಎಂಬುದನ್ನು ಹೇಳುವುದು ಕಷ್ಟ ಎನ್ನುತ್ತಾರೆ ಅವರನ್ನು ಬಲ್ಲವರು. ಸದ್ಯದ ಪರಿಸ್ಥಿತಿಯಲ್ಲಿ ಅವರು ಬಿಜೆಪಿ ನಾಯಕತ್ವವನ್ನು ಟೀಕಿಸಿದ್ದಕ್ಕೆ ಪಕ್ಷದ ವಿರುದ್ಧ ಹೋಗುತ್ತಿದ್ದಾರೆಂದು ಭಾವಿಸಲಾಗದು. ಅದೇ ರೀತಿ ಸಿಎಂ ಮಮತಾ ಬ್ಯಾನರ್ಜಿಯವರನ್ನು ಭೇಟಿ ಮಾಡಿದ್ದರಿಂದ ಈಗಲೇ ಟಿಎಂಸಿ ಸೇರುತ್ತಾರೆ ಎನ್ನಲೂ ಆಗದು. ಚಾಣಕ್ಯನ ನೀತಿಯಂತೆ ರಾಜಕೀಯ ಮಾಡುವ ಸುಬ್ರಮಣಿಯನ್ ಸ್ವಾಮಿಯವರ ರಾಜಕೀಯ ಹೆಜ್ಜೆ ಎಣಿಸುವುದು ಎಂದರೆ ನೀರಲ್ಲಿ ಮೀನಿನ ಹೆಜ್ಜೆ ಎಣಿಸಿದಂತೆ.

ABOUT THE AUTHOR

...view details