ನವದೆಹಲಿ/ಗಾಜಿಯಾಬಾದ್:ರಾಷ್ಟ್ರ ರಾಜಧಾನಿ ದೆಹಲಿ ಸಮೀಪ ಇರುವ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಆಘಾತ, ವಿಚಿತ್ರ ಹಾಗೂ ಅಚ್ಚರಿ ಎನಿಸುವ ಘಟನೆ ನಡೆದಿದೆ. ಅಂತ್ಯಕ್ರಿಯೆ ನಡೆಸಿದ ವ್ಯಕ್ತಿಯ ದೇಹದಿಂದ ತಲೆ ಬುರುಡೆ ನಾಪತ್ತೆ ಆಗಿದೆ.
ಗಾಜಿಯಾಬಾದ್‌ನ ಮುಸ್ಸೂರಿ ಪೊಲೀಸ್ ಠಾಣೆ ವ್ಯಾಪ್ತಿಯ ಇಂದರ್‌ಗರ್ಹಿ ಪ್ರದೇಶದ ನಿವಾಸಿ 55 ವರ್ಷದ ಮಂಗೇರಾಮ್ ಎಂಬುವವರು ಶನಿವಾರ ಮೃತಪಟ್ಟಿದ್ದರು. ಅಂತೆಯೇ, ಇಲ್ಲಿನ ಸ್ಮಶಾನದಲ್ಲಿ ಅಗ್ನಿಸ್ಪರ್ಶದ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಆದರೆ, ಮರುದಿನ ಎಂದರೆ ಭಾನುವಾರ ಬೆಳಗ್ಗೆ ಚಿತಾಭಸ್ಮವನ್ನು ಸಂಗ್ರಹಿಸಲು ಕುಟುಂಬ ಸದಸ್ಯರು ಸ್ಮಶಾನಕ್ಕೆ ಬಂದಿದ್ದರು.
ಆದರೆ, ಸ್ಮಶಾನಕ್ಕೆ ಬಂದ ಕುಟುಂಬ ಸದಸ್ಯರಿಗೆ ಆಘಾತ ಎದುರಾಗಿತ್ತು. ಯಾಕೆಂದರೆ, ಅಂತ್ಯಕ್ರಿಯೆ ಮಾಡಿದ್ದ ಸ್ಥಳದಲ್ಲಿ ಶವದ ತಲೆ ಬುರುಡೆಯೇ ಇರಲಿಲ್ಲ. ಅಲ್ಲದೇ, ಕೆಲವು ಮೂಳೆಗಳು ಸಹ ಕಾಣೆಯಾಗಿವೆ. ಇದೇ ವೇಳೆ ಶವಸಂಸ್ಕಾರದ ಸ್ಥಳದಲ್ಲಿ ಮಾಟ ಮಂತ್ರಕ್ಕೆ ಸಂಬಂಧಿಸಿದ ವಸ್ತುಗಳು ಕಂಡುಬಂದಿವೆ. ಮಾಂಸದ ತುಂಡುಗಳು, ಖಾಲಿ ವೈನ್ ಬಾಟಲಿ ಸಹ ಬಿದ್ದಿದ್ದು, ಇದನ್ನು ಕಂಡ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.
ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದೂ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಈ ದೂರಿನ ಮೇರೆಗೆ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಸ್ಮಶಾನಕ್ಕೆ ಸಂಬಂಧಿಸಿದ ನೌಕರರನ್ನು ಸಹ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಎರಡು ಗುಂಪುಗಳ ನಡುವೆ ಘರ್ಷಣೆ: ಬಜರಂಗ ದಳದ ಕಾರ್ಯಕರ್ತ ಸಾವು