ವಾಷಿಂಗ್ಟನ್ (ಯುಎಸ್) :ಉಪವಾಸ ಮಾಡುವುದರಿಂದ ರೋಗಕಾರಕ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿ ಕಡಿಮೆಯಾಗುತ್ತದೆ ಮತ್ತು ಇದರಿಂದ ಹೃದಯ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ ಎಂದು ಮೌಂಟ್ ಸಿನೈನಲ್ಲಿರುವ ಇಕಾನ್ ಸ್ಕೂಲ್ ಆಫ್ ಮೆಡಿಸಿನ್‌ನ ಇತ್ತೀಚಿನ ಅಧ್ಯಯನದಲ್ಲಿ ಹೇಳಲಾಗಿದೆ. ಇಲಿಗಳ ಮೇಲೆ ನಡೆಸಲಾದ ಪ್ರಯೋಗಗಳ ಮೇಲೆ ಕೇಂದ್ರೀಕರಿಸಿದ ಈ ಅಧ್ಯಯನವು, ಊಟವನ್ನು ಬಿಟ್ಟುಬಿಡುವುದರಿಂದ ದೇಹದ ಪ್ರತಿರಕ್ಷಣಾ ಕೋಶಗಳಿಗೆ ಹಾನಿಯಾಗುವ ರೀತಿಯಲ್ಲಿ ಮೆದುಳು ಪ್ರತಿಕ್ರಿಯಿಸುತ್ತದೆ ಎಂದು ಪ್ರಥಮ ಬಾರಿಗೆ ನಿರೂಪಿಸಿದೆ. ಬೆಳಗಿನ ಉಪಾಹಾರದ ಮೇಲೆ ಕೇಂದ್ರೀಕರಿಸಿದ ಸಂಶೋಧನೆಗಳನ್ನು ಇಮ್ಯುನಿಟಿ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ ಮತ್ತು ದೀರ್ಘಾವಧಿಯ ಉಪವಾಸವು ದೇಹದ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂಬುದನ್ನು ಸಂಶೋಧಕರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡಬಹುದು.
ಉಪವಾಸವು ಆರೋಗ್ಯಕರವಾಗಿದೆ ಎಂಬ ಅರಿವು ಹೆಚ್ಚುತ್ತಿದೆ ಮತ್ತು ಉಪವಾಸದಿಂದ ಉಪಯುಕ್ತ ಪ್ರಯೋಜನಗಳಿವೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದಾಗ್ಯೂ ಉಪವಾಸದಿಂದ ನಮ್ಮ ದೇಹದ ಮೇಲೆ ಕೆಲ ಅನಾರೋಗ್ಯಕರ ಅಪಾಯಗಳು ಸಹ ಎದುರಾಗಬಹುದು ಎಂಬ ಎಚ್ಚರಿಕೆಯನ್ನು ನಮ್ಮ ಸಂಶೋಧನೆ ನೀಡುತ್ತದೆ ಎಂದು ಮುಖ್ಯ ಸಂಶೋಧಕ ಫಿಲಿಪ್ ಸ್ವಿರ್ಸ್ಕಿ, ಪಿಎಚ್‌ಡಿ ಹೇಳಿದರು. ಇವರು ಇಕಾನ್ ಮೌಂಟ್ ಸಿನೈನಲ್ಲಿರುವ ಕಾರ್ಡಿಯೊವಾಸ್ಕುಲರ್ ರಿಸರ್ಚ್ ಇನ್ಸ್ಟಿಟ್ಯೂಟ್ನ ನಿರ್ದೇಶಕರಾಗಿದ್ದಾರೆ. ಇದು ಉಪವಾಸಕ್ಕೆ ಸಂಬಂಧಿಸಿದ ಕೆಲವು ಮೂಲಭೂತ ಜೀವಶಾಸ್ತ್ರವನ್ನು ಪರಿಶೀಲಿಸುವ ಯಾಂತ್ರಿಕ ಅಧ್ಯಯನವಾಗಿದೆ. ನರ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಮಧ್ಯೆ ಸಂಬಂಧವಿದೆ ಎಂದು ಅಧ್ಯಯನವು ತೋರಿಸುತ್ತದೆ ಎಂದು ಅವರು ಹೇಳುತ್ತಾರೆ.
ತುಲನಾತ್ಮಕವಾಗಿ ನೋಡಿದರೆ ಕೆಲವು ಗಂಟೆಗಳ ಕಡಿಮೆ ಉಪವಾಸದಿಂದ 24 ಗಂಟೆಗಳ ತೀವ್ರ ಉಪವಾಸದವರೆಗೆ ಇದು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಉದ್ದೇಶವನ್ನು ಸಂಶೋಧಕರು ಹೊಂದಿದ್ದಾರೆ. ಅವರು ಇಲಿಗಳ ಎರಡು ಗುಂಪುಗಳ ಮೇಲೆ ಸಂಶೋಧನೆ ನಡೆಸಿದ್ದಾರೆ. ಒಂದು ಗುಂಪಿನ ಇಲಿಗಳಿಗೆ ಬೆಳಗ್ಗೆ ಎದ್ದ ತಕ್ಷಣ ಆಹಾರ ನೀಡಲಾಯಿತು (ಈ ಉಪಹಾರವು ಅವುಗಳ ದಿನದ ದೊಡ್ಡ ಊಟವಾಗಿತ್ತು) ಮತ್ತು ಇನ್ನೊಂದು ಗುಂಪಿನ ಇಲಿಗಳಿಗೆ ಬೆಳಗಿನ ಉಪಹಾರ ನೀಡಲಿಲ್ಲ. ಬೆಳಗ್ಗೆ ಇಲಿಗಳು ಎಚ್ಚರವಾದಾಗ (ಬೇಸ್‌ಲೈನ್), ನಂತರ ನಾಲ್ಕು ಗಂಟೆಗಳ ನಂತರ ಮತ್ತು ಎಂಟು ಗಂಟೆಗಳ ನಂತರ ಮತ್ತೊಮ್ಮೆ ಎರಡೂ ಗುಂಪಿನ ಇಲಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಯಿತು.