ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಜೈಲಿಗೆ ಸ್ಥಳಾಂತರ ವಿಜಯವಾಡ (ಆಂಧ್ರಪ್ರದೇಶ):ಕೌಶಲ್ಯಾಭಿವೃದ್ಧಿ ಹಗರಣ ಆರೋಪದಲ್ಲಿ (Skill Development Case) ನ್ಯಾಯಾಂಗ ಬಂಧನಕ್ಕೊಳಗಾಗಿರುವ ಟಿಡಿಪಿ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮಾಜಿ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರನ್ನು ಭಾನುವಾರ ರಾತ್ರಿ ವಿಜಯವಾಡದಿಂದ ರಸ್ತೆ ಮಾರ್ಗವಾಗಿ ರಾಜಮಂಡ್ರಿಯ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು.
ಬಿಗಿ ಭದ್ರತೆಯ ನಡುವೆ ಪೊಲೀಸ್ ವಾಹನಗಳ ಬೆಂಗಾವಲು ಪಡೆ ವಿಜಯವಾಡದ ಎಸಿಬಿ ನ್ಯಾಯಾಲಯ ಸಂಕೀರ್ಣದಿಂದ ರಾತ್ರಿ 9:30ಕ್ಕೆ ನಿರ್ಗಮಿಸಿತು. 200 ಕಿ.ಮೀ ಸಾಗಬೇಕಿದ್ದ ರಸ್ತೆಯುದ್ಧಕ್ಕೂ ತೆಲುಗು ದೇಶಂ ಪಕ್ಷದ ಕಾರ್ಯಕರ್ತರು ಯಾವುದೇ ರೀತಿಯ ಪ್ರತಿಭಟನೆ ಕೈಗೊಳ್ಳದಂತೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಜೈಲಿನಲ್ಲಿ ವಿಶೇಷ ಸೌಲಭ್ಯ: ಇಂದು ನಸುಕಿನ ಜಾವ ಸುಮಾರು 1:16 ಗಂಟೆಗೆ ಕೇಂದ್ರ ಕಾರಾಗೃಹಕ್ಕೆ ಚಂದ್ರಬಾಬು ನಾಯ್ಡು ಅವರನ್ನು ಕರೆತರಲಾಯಿತು. ನಾಯ್ಡು ಪರ ವಕೀಲರು, ಝಡ್ ಪ್ಲಸ್ ವರ್ಗದ ಭದ್ರತೆಯ ದೃಷ್ಟಿಯಿಂದ ನಾಯ್ಡುರನ್ನು ಗೃಹಬಂಧನದಲ್ಲಿ ಇರಿಸಬೇಕೆಂದು ಮನವಿ ಮಾಡಿದರು. ಆದರೆ ನ್ಯಾಯಾಲಯವು ಈ ಮನವಿಯನ್ನು ತಿರಸ್ಕರಿಸಿತು. ಬಳಿಕ ವಯಸ್ಸು ಹಾಗೂ ವೈದ್ಯಕೀಯ ಸ್ಥಿತಿಗತಿ ಗಮನದಲ್ಲಿಟ್ಟುಕೊಂಡು ಜೈಲಿನಲ್ಲಿ ವಿಶೇಷ ಸೌಲಭ್ಯ ಕಲ್ಪಿಸುವಂತೆ ಎಸಿಬಿ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಈ ಮನವಿ ಪುರಸ್ಕರಿಸಿದ ಕೋರ್ಟ್, ವಿಶೇಷ ಸೌಲಭ್ಯ ಕಲ್ಪಿಸುವಂತೆ ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಚಂದ್ರಬಾಬು ಅವರನ್ನು ಕಸ್ಟಡಿಗೆ ಕೋರಿ ಸಿಐಡಿ ಈಗಾಗಲೇ ವಿಜಯವಾಡದ ಎಸಿಬಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಇಂದು ಈ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಇದೇ ವೇಳೆ, ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸುವುದಾಗಿ ವಕೀಲರು ತಿಳಿಸಿದ್ದಾರೆ.
ಮಗ ನಾರಾ ಲೋಕೇಶ್ ಆಕ್ರೋಶ:ಪುತ್ರ ಹಾಗುಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು ತೆಲುಗು ಜನತೆಗೆ ಭಾವುಕ ಪತ್ರ ಬರೆದಿದ್ದಾರೆ. ಲಕ್ಷಾಂತರ ಜನರ ಬದುಕು ಬದಲಾಯಿಸಲು ತಮ್ಮ ತಂದೆ ಅವಿರತವಾಗಿ ಶ್ರಮಿಸಿದ್ದಾರೆ. ನನಗೆ ತಂದೆಯಿಂದ ಸದಾ ಸ್ಪೂರ್ತಿ ಸಿಗುತ್ತದೆ. ಗೌರವ ಮತ್ತು ಪ್ರಾಮಾಣಿಕತೆಯಿಂದ ಅವರು ಕೆಲಸ ಮಾಡಿದ್ದರು. ಆದರೆ, ಇಂದು ಅವರು ಮಾಡದ ಅಪರಾಧಕ್ಕೆ ಅನ್ಯಾಯವಾಗಿ ನ್ಯಾಯಾಂಗ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಕೋಪ ಹೆಚ್ಚುತ್ತಿದೆ, ನನ್ನ ರಕ್ತ ಕುದಿಯುತ್ತಿದೆ ಎಂದು ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Chandrababu Naidu: ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ 14 ದಿನ ನ್ಯಾಯಾಂಗ ಬಂಧನ, ಆಂಧ್ರದಲ್ಲಿ ನಿಷೇಧಾಜ್ಞೆ ಜಾರಿ