ಅಚ್ಯುತಪುರ (ಆಂಧ್ರಪ್ರದೇಶ) :ವೀಕೆಂಡ್ ವೇಳೆ ಬೀಚ್‌ನಲ್ಲಿ ಮೋಜು ಮಸ್ತಿ ಮಾಡಲು ಬಂದಿದ್ದ ಆರು ಮಂದಿ ಸ್ನೇಹಿತರು ಅನಿರೀಕ್ಷಿತವಾಗಿ ಅಲೆಯ ಹೊಡೆತಕ್ಕೆ ಸಿಲುಕಿದ ಘಟನೆ ಅನಕಾಪಲ್ಲಿ ಜಿಲ್ಲೆಯ ರಾಂಬಿಲ್ಲಿ ಮಂಡಲದಲ್ಲಿ ಭಾನುವಾರ ನಡೆದಿದೆ. ಸಮುದ್ರದ ನೀರಿನಲ್ಲಿ ಮುಳುಗಿ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.
ರಾಂಬಿಲ್ಲಿ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ವಿಶಾಖಪಟ್ಟಣದ ಕಟ್ಟೋಜು ಸಾಯಿ (19), ಕಟ್ಟೋಜು ಕಾವ್ಯಾ (17), ಸಾಯಿ ಪ್ರಿಯಾಂಕಾ (27), ಸಿಂಹಾಚಲಂನ ಗನ್ನವರಪು ರವಿಶಂಕರ್ (28), ಅಲ್ಲಿಪುರದ ಕಂಡಿಪಲ್ಲಿ ಫಣೀಂದ್ರ (25), ಕಂಡಿಪಲ್ಲಿ ಸಾಯಿಕಿರಣ್ (25) ಎಂಬುವರು ಭಾನುವಾರ ಬೆಳಗ್ಗೆ ವಿಹಾರಕ್ಕೆಂದು ರಾಂಬಿಲ್ಲಿ ಮಂಡಲದ ಸೀತಾಪಾಲೆಂ ಬೀಚ್‌ಗೆ ಬಂದಿದ್ದರು. ಬೀಚ್‌ನಲ್ಲಿ ಮೋಜು ಮಸ್ತಿ ಮಾಡಿದ ಆರು ಮಂದಿ, ಬಳಿಕ ಸಮುದ್ರಕ್ಕೆ ಸ್ನಾನಕ್ಕೆ ಎಂದು ತೆರಳಿದ್ದರು.
ದಡಕ್ಕೆ ಹೊಂದಿಕೊಂಡಿದ್ದ ಬಂಡೆಯ ಮೇಲೆ ನಿಂತು ಫೋಟೋ ತೆಗೆಯುತ್ತಿದ್ದಾಗ ಏಕಾಏಕಿ ದೊಡ್ಡ ಅಲೆಯೊಂದು ಬಂದು ಬಡಿದಿದ್ದು, ಆರು ಮಂದಿ ಸ್ನೇಹಿತರು ಸಮುದ್ರಕ್ಕೆ ಬಿದ್ದಿದ್ದಾರೆ. ಯುವಕರು ನೀರಿನಲ್ಲಿ ಕೊಚ್ಚಿ ಹೋಗುವುದನ್ನು ಗಮನಿಸಿದ ಸುತ್ತಮುತ್ತಲಿನವರು ಜೋರಾಗಿ ಕೂಗಿದ್ದಾರೆ. ಬಳಿಕ, ಅಲ್ಲೇ ದಡದಲ್ಲಿದ್ದ ಮೀನುಗಾರರು ಕಟ್ಟೋಜು ಸಾಯಿ ಹೊರತುಪಡಿಸಿ ಉಳಿದ ಐವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಯಿ ಪ್ರಿಯಾಂಕಾ ಉಪ್ಪು ನೀರು ಕುಡಿದು ಪ್ರಜ್ಞಾಹೀನಳಾಗಿದ್ದು, ಉಳಿದ ನಾಲ್ವರು ಸುರಕ್ಷಿತವಾಗಿ ಪಾರಾಗಿದ್ದಾರೆ.
ಇದನ್ನೂ ಓದಿ :ಹಿಮಾಚಲ ಪ್ರದೇಶದಲ್ಲಿ ಸುರಿದ ಭಾರಿ ಮಳೆಗೆ ಕೊಚ್ಚಿ ಹೋದ ವಾಹನಗಳು - ದೇಶಾದ್ಯಂತ ಮುಂಗಾರು ಅಬ್ಬರ: ವಿಡಿಯೋ