ವಿಜಯವಾಡ:ತಿರುಪತಿಯ ಬಸ್ ನಿಲ್ದಾಣದಿಂದ ಅಪಹರಣಕ್ಕೊಳಗಾಗಿದ್ದ ಛತ್ತೀಸ್‌ಗಡದ ಆರು ವರ್ಷದ ಬಾಲಕ ಶಿವಮ್ ಸಾಹುನನ್ನು ಆಂಧ್ರಪ್ರದೇಶ ಪೊಲೀಸರು ರಕ್ಷಿಸಿದ್ದಾರೆ.
ಫೆಬ್ರವರಿ 27 ರಂದು ಛತ್ತೀಸ್‌ಗಡ ಮೂಲದ ಕುಟುಂಬವೊಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಗೆ ತೆರಳಿತ್ತು. ಈ ವೇಳೆ ಅಲಿಪಿರಿ ಲಿಂಕ್ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವನು ಬಾಲಕನನ್ನು ಅಪಹರಿಸಿದ್ದನು. ಈ ಸಂಬಂಧ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ತನಿಖೆ ಕೈಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅಪಹರಣಕಾರನನ್ನು ಆಂಧ್ರಪ್ರದೇಶದ ಚಿತ್ತೋರ್ ಜಿಲ್ಲೆಯ ನಿವಾಸಿ ಶಿವಪ್ಪ ಎಂದು ಗುರುತಿಸಿದ್ದು, ಈತ ಬಾಲಕನನ್ನು ವಿಜಯವಾಡದಲ್ಲಿ ಬಿಟ್ಟು ಪರಾರಿಯಾಗಿದ್ದನು.
ಓದಿ: ಮತ್ತೆ ದೇಶದಲ್ಲಿ ಕೋವಿಡ್ ಸಾವು-ನೋವು ಹೆಚ್ಚಳ.. 2.97 ಕೋಟಿ ಜನರಿಗೆ ವ್ಯಾಕ್ಸಿನ್
ವಿಜಯವಾಡ ಪೊಲೀಸರು ಬಾಲಕನನ್ನು ಪತ್ತೆ ಹಚ್ಚಿ ಕೂಡಲೇ ತಿರುಪತಿ ನಗರ ಪೊಲೀಸರಿಗೆ ಒಪ್ಪಿಸಿದ್ದರು. ಇವರು ಬಾಲಕನನ್ನು ಮಕ್ಕಳ ಸಹಾಯವಾಣಿ ಕೇಂದ್ರದಲ್ಲಿ ಬಿಟ್ಟಿದ್ದಾರೆ. ಸದ್ಯ ಪೋಷಕರು ಬಾಲಕನೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದು, ಇನ್ನೆರಡು ಮೂರು ದಿನಗಳಲ್ಲಿ ಬಾಲಕ ಮನೆ ಸೇರಲಿದ್ದಾನೆ.