ಮಿಡ್ನಾಪುರ, ಪಶ್ಚಿಮ ಬಂಗಾಳ:ಶನಿವಾರ ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದು, 4 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಖರಗ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬುರಮಳ ಎಂಬಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 16ರಲ್ಲಿ ಹೂವು ತುಂಬುತ್ತಿದ್ದ 407 ಪಿಕಪ್ ವ್ಯಾನ್‌ಗೆ ಸಿಮೆಂಟ್ ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 5 ಜನ ಸಾವನ್ನಪ್ಪಿದ್ದಾರೆ. ಡೆಬ್ರಾ ಟೋಲ್ ಪ್ಲಾಜಾದಿಂದ ಕೇವಲ 1 ಕಿಮೀ ದೂರದಲ್ಲಿ ಈ ದುರಂತ ಘಟನೆ ನಡೆದಿದೆ.
ಈ ಅಪಘಾತದ ಬಗ್ಗೆ ಬೀರೇಂದ್ರನಾಥ್ ಮಾತನಾಡಿ, ಬೆಳಗ್ಗೆ ಮುಂಜಾನೆ 3 ಗಂಟೆಯ ಸುಮಾರಿಗೆ ಬುರಮಳದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 407 ಪಿಕಪ್ ವ್ಯಾನ್‌ಗೆ 10-12 ಕಾರ್ಮಿಕರು ಹೂ ತುಂಬುವ ಕೆಲಸ ಮಾಡುತ್ತಿದ್ದರು. ಈ ವೇಳೆ, ಏಕಾಏಕಿ ಸಿಮೆಂಟ್ ತುಂಬಿದ್ದ ಲಾರಿ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರು. ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮತ್ತೊಬ್ಬರು ಮಾರ್ಗ ಮಧ್ಯೆದಲ್ಲೇ ಸಾವನ್ನಪ್ಪಿದರು. ನನ್ನ ಸಹೋದರನೂ ಸಹ ಗಾಯಗೊಂಡಿದ್ದಾನೆ. ಅವನನ್ನು ಚಿಕಿತ್ಸೆಗಾಗಿ ಏಮ್ಸ್‌ಗೆ ಕರೆದೊಯ್ಯಲಾಗುತ್ತಿದೆ ಎಂದು ಬೀರೇಂದ್ರ ನಾಥ್ ಎಂಬುವರು ಅಪಘಾತದ ಮಾಹಿತಿ ನೀಡಿದ್ದಾರೆ.
ಅಪಘಾತದ ನಂತರ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡರು. ಬಳಿಕ ಪೊಲೀಸರು ಮತ್ತು ಆಡಳಿತದವರು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಲ್ಲಿ ಕೆಲವರ ಶವಗಳನ್ನು ಈಗಾಗಲೇ ಖರಗ್‌ಪುರ ಆಸ್ಪತ್ರೆಗೆ ಮತ್ತು ಇತರರನ್ನು ಮರಣೋತ್ತರ ಪರೀಕ್ಷೆಗಾಗಿ ಮೇದಿನಿಪುರ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಎಲ್ಲರೂ ಖರಗ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮುಕ್ಸುದ್‌ಪುರ ಪ್ರದೇಶದ ನಿವಾಸಿಗಳು ಆಗಿದ್ದಾರೆ ಎಂದು ತಿಳಿದು ಬಂದಿದೆ.
ಪಶ್ಚಿಮ ಮೇದಿನಿಪುರ ಜಿಲ್ಲೆಯ ಡೆಬ್ರಾ ಟೋಲ್ ಪ್ಲಾಜಾ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಲಕ್ಷ್ಮೀ ಪೂಜೆಯ ನಿಮಿತ್ತ ಈ ದಿನ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕೋಲಘಟ್ಟಕ್ಕೆ ತೆರಳಲು ಕಾರ್ಮಿಕರು ಪಿಕಪ್ ವ್ಯಾನ್‌ನಲ್ಲಿ ಹೂಗಳನ್ನು ತುಂಬುತ್ತಿದ್ದರು. ಸುಮಾರು 10-12 ಕಾರ್ಮಿಕರು ಈ ಕೆಲಸದಲ್ಲಿ ತೊಡಗಿದ್ದರು. ಹೀಗಿರುವಾಗ ಏಕಾಏಕಿ ಹಿಂಬದಿಯಿಂದ ಬಂದ ಸಿಮೆಂಟ್ ಲೋಡ್ ಲಾರಿ ನಿಯಂತ್ರಣ ತಪ್ಪಿ ಪಿಕಪ್ ವ್ಯಾನ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಭೀಕರ ರಸ್ತೆ ಅಪಘಾತದಿಂದ ಆ ಪ್ರದೇಶದಲ್ಲಿ ಶೋಕದ ಛಾಯೆ ಆವರಿಸಿದೆ.
ಓದಿ:ಕರ್ತವ್ಯನಿರತ ಪೊಲೀಸ್ ಕಾನ್ಸ್ಟೇಬಲ್ಗೆ ಕಾರು ಡಿಕ್ಕಿ: ಎದೆ ಝಲ್ಲೆನಿಸುವ ವಿಡಿಯೋ