ಹೈದರಾಬಾದ್ (ತೆಲಂಗಾಣ): ಆದಿಲಾಬಾದ್ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆ ಅವಾಂತರ ಸೃಷ್ಟಿಸಿದೆ. ಶುಕ್ರವಾರ ಸಿಡಿಲು ಬಡಿದು ಮೂವರು ಸಾವನ್ನಪ್ಪಿದ್ದು ಸೇರಿ ಒಟ್ಟು ಐವರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಆದಿಲಾಬಾದ್ ಜಿಲ್ಲೆಯ ಜೈನಾಥ್ ತಾಲೂಕಿನ ಗುಡಾದ ಯಾಸಿಂ (38) ತನ್ನ ಪತ್ನಿ ಜೊತೆಗೆ ಜಮೀನಿನಿಂದ ಮನೆಗೆ ಹೋಗಲು ಗಾಡಿ ತೊಳೆಯುತ್ತಿದ್ದರು. ಈ ವೇಳೆ ಯಾಸಿಂಗೆ ಸಿಡಿಲು ಬಡಿದಿದೆ. ಈ ಘಟನೆಯಲ್ಲಿ ಯಾಸಿಂ ಹಾಗೂ ಆತನ ಎತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೋಮರಂ ಭೀಮ್ ಜಿಲ್ಲೆಯ ವಾಂಕಿಡಿ ತಾಲೂಕಿನ ಕೆಡೆಗಾಂನ ಪತಿ-ಪತ್ನಿ ಗೆದ್ದಂ ಪದ್ಮ (22) ಮತ್ತು ಪತಿ ತುಳ್ಳಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಧಾರಾಕಾರ ಮಳೆ ಸುರಿದಿದೆ. ಅವರು ಕೂಡಲೇ ಪಕ್ಕದಲ್ಲಿರುವ ಮರದ ಕೆಳಗೆ ಆಶ್ರಯ ಪಡೆದಿದ್ದಾರೆ. ಮರಕ್ಕೆ ಸಿಡಿಲು ಬಡಿದು ಪದ್ಮಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಕೆಯ ಪತಿಗೆ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಂಚಿರ್ಯಾಲ ಜಿಲ್ಲೆಯ ಕೋಟಪಲ್ಲಿ ತಾಲೂಕಿನ ರೊಯ್ಯಲಪಲ್ಲಿಯ ಗೇಣಿದಾರ ರೌಲ ರವೀಂದರ್ (28) ಎಂಬುವರು ಹತ್ತಿ ಹೊಲದಲ್ಲಿ ಕಳೆ ಕೀಳುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮುಳುಗು ಜಿಲ್ಲೆಯ ಮಂಗಪೇಟೆ ಮಂಡಲದ ಕೋತೂರು-ಮೊಟ್ಲಗುಡೆಂ ಪಂಚಾಯಿತಿ ವ್ಯಾಪ್ತಿಯ ಬೊಮ್ಮಾಯಿಗುಡೆಂನ ಈಸಂ ಪವನಕಲ್ಯಾಣ (24) ಗುರುವಾರ ರಾತ್ರಿ ಬೆಳೆ ಕಾಯಲು ಹೋಗಿದ್ದರು. ಭಾರಿ ಮಳೆಯಿಂದಾಗಿ ಮನೆಗೆ ಹಿಂದಿರುಗುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.