ಗುಂಡಿನ ದಾಳಿ ನಡೆದ ಸ್ಥಳವನ್ನು ಪರಿಶೀಲಿಸಿದ ಅಧಿಕಾರಿಗಳು ಲಖಿಸರಾಯ್(ಬಿಹಾರ):ಒಂದೇ ಕುಟುಂಬದ ಆರು ಜನರ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿರುವ ಘಟನೆ ಲಖಿಸರಾಯ್ ನಗರದ ಪಂಜಾಬಿ ಪ್ರದೇಶದಲ್ಲಿ ಇಂದು ನಡೆದಿದೆ. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ರಾಜಧಾನಿಯ ಪಿಎಂಸಿಎಚ್‌ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಳಿಗ್ಗೆ ಲಖಿಸರಾಯ್‌ನಲ್ಲಿ ಒಂದೆಡೆ ಜನರು ಛತ್ ಹಬ್ಬ ಆಚರಣೆಯಲ್ಲಿ ತೊಡಗಿದ್ದರು. ಮತ್ತೊಂದೆಡೆ, ಇದೇ ನಗರದ ಪಂಜಾಬಿ ಪ್ರದೇಶದಲ್ಲಿ ಯುವಕನೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಛತ್ಘಾಟ್ನಿಂದ ಮನೆಗೆ ಮರಳುತ್ತಿದ್ದ ಕುಟುಂಬವನ್ನು ಗುರಿಯಾಗಿಸಿ ಗುಂಡು ಹಾರಿಸಿದ್ದಾನೆ.
"ನಾವು ಛತ್ಘಾಟ್ನಿಂದ ಹಿಂತಿರುಗುತ್ತಿದ್ದಾಗ, ನಮ್ಮ ನೆರೆಯ ಆಶಿಶ್ ಚೌಧರಿ ನಮಗೆ ಹಿಂದಿನಿಂದ ಗುಂಡು ಹಾರಿಸಿದ. ನನ್ನ ಅತ್ತಿಗೆ, ಮಾವ ಸೇರಿದಂತೆ ಆರು ಜನರನ್ನು ಆತ ಟಾರ್ಗೆಟ್ ಮಾಡಿದ್ದಾನೆ. ನನ್ನ ಮನೆಯ ಹುಡುಗಿ ಆ ಯುವಕನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಆರೋಪಿ ಆಕೆಯನ್ನು ಮದುವೆಯಾಗಲು ಬಯಸಿದ್ದ. ಆದರೆ ನಮ್ಮ ಹುಡುಗಿ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡು ಎಲ್ಲರಿಗೂ ಗುಂಡು ಹಾರಿಸಿದ್ದಾನೆ" ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರೊಬ್ಬರು ಹೇಳಿದರು.
"ಆರೋಪಿ ಮೃತ ಕುಟುಂಬದ ಹುಡುಗಿಯನ್ನು ಪ್ರೀತಿಸುತ್ತಿದ್ದು, ಮದುವೆಯಾಗಲು ಬಯಸಿದ್ದ. ಆದರೆ ಆಕೆಯ ಕುಟುಂಬ ನಿರಾಕರಿಸಿತ್ತು. ಹೀಗಾಗಿ ಕುಪಿತಗೊಂಡು ಗುಂಡಿನ ದಾಳಿ ನಡೆಸಿದ್ದಾನೆ. ಸದ್ಯ ಆತ ಪರಾರಿಯಾಗಿದ್ದು, ಶೋಧ ಮುಂದುವರಿದಿದೆ" ಎಂದು ಲಖಿಸರಾಯ್ ಎಸ್ಪಿ ಪಂಕಜ್ ಕುಮಾರ್ ಮಾಹಿತಿ ನೀಡಿದರು.
ಇದನ್ನೂ ಓದಿ:ತೆಲಂಗಾಣ ವಿಧಾನಸಭೆ ಚುನಾವಣೆ: ಸೈಬರ್ ದಾಳಿಗೆ ಹೆದರಿ ಅಭ್ಯರ್ಥಿ ಆತ್ಮಹತ್ಯೆ