ಬಲರಾಂಪುರ್(ಉತ್ತರ ಪ್ರದೇಶ): ದೇವರ ದರ್ಶನಕ್ಕೆಂದು ತೆರಳುತ್ತಿದ್ದ ಕುಟುಂಬವೊಂದು ಅಪಘಾತಕ್ಕೀಡಾಗಿರುವ ಪರಿಣಾಮ ಸ್ಥಳದಲ್ಲೇ ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಉತ್ತರಪ್ರದೇಶದ ಬಲರಾಂಪುರ್ನಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ಬಲರಾಂಪುರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 730ರ ತುಳಸಿಪುರ ರಸ್ತೆ ಬಳಿ ಈ ದುರ್ಘಟನೆ ನಡೆದಿದ್ದು, ಇವರೆಲ್ಲರೂ ದೇವಸ್ಥಾನವೊಂದಕ್ಕೆ ಭೇಟಿ ನೀಡಲು ತೆರಳುತ್ತಿದ್ದರು. ಬೈಕ್ ಸವಾರ ಪ್ರಾಣ ಉಳಿಸುವ ಉದ್ದೇಶದಿಂದ ಕಾರಿನಲ್ಲಿದ್ದ ಆರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸತ್ತವರಲ್ಲಿ ಮೂವರು ಮಕ್ಕಳು, ಇಬ್ಬರು ಯುವಕರು ಹಾಗೂ ಓರ್ವ ಮಹಿಳೆ ಸೇರಿದ್ದಾರೆ.
ದೇವಸ್ಥಾನಕ್ಕೆ ತೆರಳುತ್ತಿದ್ದ ಆರು ಮಂದಿ ಸಾವು ಇಂದು ಬೆಳಗ್ಗೆ 7:30ರ ಸುಮಾರಿಗೆ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಬೈಕ್ ಸವಾರನೋರ್ವ ಡಿಕ್ಕಿ ಹೊಡೆಯಲು ಮುಂದಾಗಿದ್ದ ವೇಳೆ ಅದನ್ನ ತಪ್ಪಿಸುವ ಉದ್ದೇಶದಿಂದ ಕಾರ್ ಡ್ರೈವರ್ ಬ್ರೇಕ್ ಹಾಕಿದ್ದಾನೆ. ತಕ್ಷಣವೇ ಕಾರು ಪಕ್ಕದ ಕೆರೆಗೆ ಬಿದ್ದಿರುವ ಕಾರಣ ಎಲ್ಲರೂ ಸಾವನ್ನಪ್ಪಿದ್ದಾರೆ. ಉಳಿದಂತೆ ಬೈಕ್ ರಸ್ತೆಯಲ್ಲಿ ಪಲ್ಟಿಯಾಗಿದ್ದು, ಆತನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದಿದ್ದಾರೆ.
ಇದನ್ನೂ ಓದಿರಿ: ನಂದೂರ್ಬಾರ್ನಲ್ಲಿ ಮೇಕೆ ಕೊಂದ ಹೆಬ್ಬಾವು: Video Viral
ಮೃತರನ್ನ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ಸಹ ದಾಖಲು ಮಾಡಿಕೊಂಡಿದ್ದಾರೆ.