ದಿಬ್ರುಗಢ/ನಾಗಾಂವ್ (ಅಸ್ಸೋಂ):ಅಸ್ಸೋಂನ ದಿಬ್ರುಗಢ ಮತ್ತು ನಾಗಾಂವ್ ಜಿಲ್ಲೆಯುಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ ವರದಿಯಾಗಿದೆ. ಈ ಎರಡೂ ಘಟನೆಗಳಿಂದ ಆಕ್ರೋಶಗೊಂಡ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ದಿಬ್ರುಗಢ ಜಿಲ್ಲೆಯಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರೆ, ನಾಗಾಂವ್ನಲ್ಲಿ ಪೊಲೀಸ್ ವಾಹನದ ಮೇಲೆಯೇ ಆಕ್ರೋಶಿತ ಜನರು ದಾಳಿ ಮಾಡಿದ್ದಾರೆ.
ರಸ್ತೆ ದಾಟುತ್ತಿದ್ದ ಮೂವರು ಮಹಿಳೆಯರು ಸಾವು: ದಿಬ್ರುಗಢ ಜಿಲ್ಲೆಯ ಚಾಬುವಾದಲ್ಲಿ ಸೋಮವಾರ ಸಂಜೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯರನ್ನು ರೀಟಾ ಭಕ್ತ, ಮಿನಾ ಬೇಡಿಯಾ ಮತ್ತು ಸುನಿತಾ ಬೇಡಿಯಾ ಎಂದು ಗುರುತಿಸಲಾಗಿದೆ.
ಈ ಮೂವರು ಸಹ ರಾಷ್ಟ್ರೀಯ ಹೆದ್ದಾರಿ 37ರಲ್ಲಿ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದರು. ಆದರೆ, ಈ ಸಮಯದಲ್ಲಿ ವೇಗವಾಗಿ ಬಂದ ಡಿಜೈರ್ ಕಾರು ಮೂವರಿಗೆ ಡಿಕ್ಕಿ ಹೊಡೆದಿದೆ. ಅಲ್ಲದೇ, ಈ ಭೀಕರ ಅಪಘಾತದಲ್ಲಿ ಕಾರು ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದೆ. ಮತ್ತೊಂದೆಡೆ, ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ಗಾಯಾಳು ಮಹಿಳೆ ದಿಬ್ರುಗಢ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆ ಬಲಿಯಾದ ವಿಷಯ ತಿಳಿದ ಸ್ಥಳೀಯರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದಾರೆ. ಕಾರು ಚಾಲಕನ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ಶುರು ಮಾಡಿದ್ದಾರೆ. ಅಲ್ಲದೇ, ಟೈರ್‌ಗಳನ್ನು ಸುಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಿದ್ದಾರೆ. ಈ ವೇಳೆ, ಪೊಲೀಸರು ಸಾರ್ವಜನಿಕರ ಮನವೊಲಿಸಲು ಯತ್ನಿಸಿದರಾದರೂ ಪರಿಸ್ಥಿತಿ ಹತೋಟಿ ಸಾಧ್ಯವಾಗಿಲ್ಲ.