ದೌಸಾ (ಜೈಪುರ):ಪ್ರಯಾಣಿಕರನ್ನು ತುಂಬಿದ್ದ ಜೀಪ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿ ಆರು ಜನ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯ ಮಂದಾವರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಡೆದಿದೆ. ಭೀಕರ ಅಪಘಾತದಲ್ಲಿ 11 ಜನ ಗಾಯಗೊಂಡಿದ್ದು, ಈ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಜೈಪುರದ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯ ವಿವರ:ಇಲ್ಲಿಯ ಮಾಂದಾವರದ ಹೆದ್ದಾರಿಯಲ್ಲಿ ತಂಪು ಪಾನೀಯ ಸಾಗಿಸುತ್ತಿದ್ದ ಟ್ರಕ್ವೊಂದು ಪ್ರಯಾಣಿಕರಿದ್ದ ಜೀಪ್ಗೆ ಡಿಕ್ಕಿ ಹೊಡೆದು ನಂತರ ಜೀಪಿನ ಮೇಲೆ ಪಲ್ಟಿಯಾಗಿದೆ. ಪರಿಣಾಮ ಜೀಪ್ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಉಸಿರು ಚೆಲ್ಲಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಈವರೆಗೆ ಅಪಘಾತದಲ್ಲಿ ಆರು ಜನ ಮೃತಪಟ್ಟಿದ್ದಾರೆ. ಇನ್ನು ಅಪಘಾತದ ಬಗ್ಗೆ ಮಾಹಿತಿ ಪಡೆದ ಮಂದಾವರ ಠಾಣೆ ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ಅಲ್ಲಿನ ಜನರ ನೆರವಿನೊಂದಿಗೆ ರಕ್ಷಣಾ ಕಾರ್ಯ ನಡೆಸಿ, ಗಾಯಾಳುಗಳನ್ನು ಸ್ಥಳೀಯ ಸಿಎಚ್‌ಸಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತದೇಹಗಳನ್ನು ಕೂಡ ಮಹ್ವಾ ಸಿಎಚ್‌ಸಿಯ ಶವಾಗಾರದಲ್ಲಿ ಇರಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಜೈಪುರದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಜೀಪ್ನಲ್ಲಿದ್ದ ಜನ ಸಮೀಪದ ಹಳ್ಳಿಗಳಿಗೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕ್ರೇನ್ ಮತ್ತು ಜೆಸಿಬಿ ಸಹಾಯದಿಂದ ಟ್ರಕ್ ತೆರವು:ಜೀಪ್ ಮೇಲೆ ಟ್ರಕ್ ಪಲ್ಟಿಯಾದ ಕಾರಣ ಹೆಚ್ಚಿನ ಪ್ರಯಾಣಿಕರು ಸಿಲುಕಿಕೊಂಡಿದ್ದರು. ಜೆಸಿಬಿ ಮತ್ತು ಕ್ರೇನ್ ಸಹಾಯದಿಂದ ಜೀಪ್ ಮೇಲೆ ಬಿದ್ದ ಟ್ರಕ್ಅನ್ನು ತೆರವು ಮಾಡಲಾಯಿತು. ಅಷ್ಟೊತ್ತಿಗಾಗಲೇ ನಾಲ್ವರು ಸಾವನ್ನಪ್ಪಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.