ಭರೂಚ್(ಗುಜರಾತ್): ಜಿಲ್ಲೆಯ ವಾಗ್ರಾ ತಾಲೂಕಿನ ಮುಲ್ಲರ್ ಗ್ರಾಮದ ಗಂಧರ್ ಕರಾವಳಿಯಲ್ಲಿ ಒಂದೇ ಕುಟುಂಬದ ಇಬ್ಬರು ಪುಟ್ಟ ಮಕ್ಕಳು ಸೇರಿದಂತೆ ಆರು ಮಂದಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಮುದ್ರದ ನೀರು ಏಕಾಏಕಿ ಹೆಚ್ಚಾದ ಪರಿಣಾಮ ದಡದಲ್ಲಿ ಆಟವಾಡುತ್ತಿದ್ದ ಮಕ್ಕಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಅವರನ್ನು ರಕ್ಷಿಸಲು ಯತ್ನಿಸಿದ ಕುಟುಂಬ ಸದಸ್ಯರು ನೀರಿನಲ್ಲಿ ಮುಳುಗಿದ್ದಾರೆ. ಒಟ್ಟು 8 ಮಂದಿ ನೀರಿನಲ್ಲಿ ಮುಳುಗಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಇನ್ನುಳಿದ 6 ಮಂದಿ ನೀರು ಪಾಲಾಗಿದ್ದಾರೆ.
ಗಂಧರ್ ಕರಾವಳಿ ಪ್ರದೇಶದ ಸಮುದ್ರದ ಉಬ್ಬರವಿಳಿತದಲ್ಲಿ ಮುಳುಗಿದ ಎಲ್ಲ 8 ಜನರನ್ನು ಭರೂಚ್‌ನ ಬ್ರಾಡ್ ಹಾರ್ಟ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಪರೀಕ್ಷಿಸಿ ಮಕ್ಕಳು ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ವಾಗ್ರಾದ ಮುಲ್ಲರ್ ಗ್ರಾಮದಲ್ಲಿ ವಾಸಿಸುತ್ತಿರುವ ಬಿಜೆಪಿ ಮುಖಂಡ ಬಲ್ವಂತ್ ಗೋಹಿಲ್ ಅವರ ಕುಟುಂಬದಲ್ಲಿ ಈ ದುರ್ಘಟನೆ ನಡೆದಿದೆ. ವಿಷಯ ತಿಳಿದ ವಾಗ್ರಾ ಶಾಸಕ ಅರುಣ್ ಸಿಂಗ್ ರಾಣಾ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಬೀಚ್ ಭರೂಚ್ ಜಿಲ್ಲೆಯ ವಾಗ್ರಾ ತಾಲೂಕಿನ ಮುಲ್ಲರ್ ಗ್ರಾಮದ ಗಂಧರ್ ಭಾಗದಲ್ಲಿದೆ, ಅಲ್ಲಿ ಗೋಹಿಲ್ ಕುಟುಂಬವು ವಿಹಾರಕ್ಕೆ ಹೋಗಿದ್ದರು. ಸಮುದ್ರದ ರಭಸಕ್ಕೆ ದಡದಲ್ಲಿ ಆಟವಾಡುತ್ತಿದ್ದ ಮಕ್ಕಳು ಸಮುದ್ರದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರು. ಈ ದೃಶ್ಯವನ್ನು ನೋಡಿದ ಕುಟುಂಬಸ್ಥರು ಹಾಗೂ ಇತರರು ಮಕ್ಕಳನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ, ಅಲೆಯ ನೀರು ವೇಗವಾಗಿ ಬಂದಿದ್ದರಿಂದ ನೀರಿನಲ್ಲಿ ಮುಳುಗಿ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.