ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದಲ್ಲಿ 2023ರಲ್ಲಿಯೂ ಕೂಡ ಬೆಚ್ಚಿಬೀಳಿಸುವ ಭಯೋತ್ಪಾದಕ ದಾಳಿಗಳು ನಡೆದಿವೆ. ಉ್ರಗರ ದಾಳಿಗಳಲ್ಲಿ ಈ ವರ್ಷವು 134 ಸಾವು, ನೋವುಗಳಿಗೆ ಸಂಭವಿಸಿವೆ. ಹೆಚ್ಚಿನ ಎನ್‌ಕೌಂಟರ್ ಮತ್ತು ದಾಳಿಗಳು ಕೇಂದ್ರಾಡಳಿತ ಪ್ರದೇಶದ ಅರಣ್ಯ ಮತ್ತು ಎತ್ತರದ ಪ್ರದೇಶಗಳಲ್ಲಿ ನಡೆದಿವೆ.
ಭಯೋತ್ಪಾದಕ ದಾಳಿಗಳಲ್ಲಿ ಮೃತಪಟ್ಟ 134 ಜನರಲ್ಲಿ 87 ಉಗ್ರರು, 33 ಭದ್ರತಾ ಪಡೆ ಸಿಬ್ಬಂದಿ ಮತ್ತು 12 ನಾಗರಿಕರು ಸೇರಿದ್ದಾರೆ. 33 ಶಸ್ತ್ರಸಜ್ಜಿತ ಸೈನಿಕರ ಪೈಕಿ 26 ಯೋಧರು ಆರು ಪ್ರಮುಖ ಭಯೋತ್ಪಾದಕ ಸಂಬಂಧಿತ ಘಟನೆಗಳಲ್ಲಿ ಹುತಾತ್ಮರಾಗಿದ್ದಾರೆ. ಅವುಗಳಲ್ಲಿ ನಾಲ್ಕು ಘಟನೆಗಳು ಜಮ್ಮುವಿನ ಗಡಿ ರಜೌರಿ ಹಾಗೂ ಪೂಂಚ್ ವಲಯದಲ್ಲಿ ಆಗಿವೆ.
2023ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವರದಿಯಾದ ಪ್ರಮುಖ ಭಯೋತ್ಪಾದಕ ದಾಳಿಗಳು
ಏಪ್ರಿಲ್ 20ರಂದು ಭಟ್ಟ ದುರ್ರಿಯನ್ನಲ್ಲಿ ದಾಳಿ:ಪೂಂಚ್ ಜಿಲ್ಲೆಯ ಮೆಂಧರ್ ತೆಹ್ಸಿಲ್‌ನ ಭಟ್ಟಾ ದುರಿಯನ್‌ನಲ್ಲಿ ಭಿಂಬರ್ ಗಲಿ ಮತ್ತು ಪೂಂಚ್ ನಡುವೆ ಉಗ್ರರು ನಡೆಸಿದ ದಾಳಿಯಲ್ಲಿ ಐವರು ರಾಷ್ಟ್ರೀಯ ರೈಫಲ್ಸ್ ಸೈನಿಕರಾದ ಮನ್‌ದೀಪ್ ಸಿಂಗ್, ಕುಲ್ವಂತ್ ಸಿಂಗ್, ಹರ್ಕ್ರಿಶನ್ ಸಿಂಗ್, ಸೇವಕ್ ಸಿಂಗ್ ಮತ್ತು ದೇಬಾಶಿಶ್ ಬಿಸ್ವಾಲ್ ಹುತಾತ್ಮರಾಗಿದ್ದರು. ಓರ್ವ ಯೋಧ ಗಾಯಗೊಂಡಿದ್ದರು ಎಂದು ಭಾರತೀಯ ಸೇನೆ ತಿಳಿಸಿತ್ತು.
ಮೇ 5ರಂದು ಕೇಸರಿ ಹಿಲ್ಸ್ ಅರಣ್ಯದಲ್ಲಿ ದಾಳಿ:ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಕಂಡಿ ಪ್ರದೇಶದ ಕೇಸರಿ ಹಿಲ್ಸ್ ಅರಣ್ಯದಲ್ಲಿ ಉಗ್ರರು ರಿಮೋಟ್ ಕಂಟ್ರೋಲ್ ಬಳಸಿ ಐಇಡಿ ಸ್ಫೋಟಿಸಿದ್ದರು. ಇದರಲ್ಲಿ ವಿಶೇಷ ಪಡೆಗಳ ನಾಲ್ವರು ಕಮಾಂಡೋಗಳು ಹಾಗೂ ಸೇನೆಯ ರಾಷ್ಟ್ರೀಯ ರೈಫಲ್ಸ್‌ನ ಬೆಟಾಲಿಯನ್ನ ಯೋಧರೊಬ್ಬರು ಪ್ರಾಣ ತ್ಯಾಗ ಮಾಡಿದ್ದರು. ಪ್ಯಾರಾಟ್ರೂಪರ್ ಸಿದ್ಧಾಂತ್ ಚೆಟ್ರಿ, ಪ್ಯಾರಾಟ್ರೂಪರ್ ಪ್ರಮೋದ್ ನೇಗಿ, ಲ್ಯಾನ್ಸ್ ನಾಯಕ್ ರುಚಿನ್ ಸಿಂಗ್ ರಾವತ್, ಪರೈಕ್ ಅರವಿಂದ್ ಕುಮಾರ್ ಮತ್ತು ಹವಾಲ್ದಾರ್ ನೀಲಂ ಸಿಂಗ್ ಹುತಾತ್ಮರಾದವರು.
ಆಗಸ್ಟ್ 4ರಂದು ಹಾಲನ್ ಅರಣ್ಯದಲ್ಲಿ ಗುಂಡಿನ ಚಕಮಕಿ: ಆರ್ಟಿಕಲ್ 370 ರದ್ದುಗೊಂಡು ನಾಲ್ಕನೇ ವಾರ್ಷಿಕೋತ್ಸವಕ್ಕೆ ಒಂದು ದಿನ ಬಾಕಿಯಿರುವಾಗಲೇ, ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಹಾಲನ್ ಅರಣ್ಯದಲ್ಲಿ ಉಗ್ರಗಾಮಿಗಳು ಹಾಗೂ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ 34 ರಾಷ್ಟ್ರೀಯ ರೈಫಲ್ಸ್‌ನ ಮೂವರು ಸೈನಿಕರಾದ ಹವಿಲ್ದಾರ್ ಬಾಬುಲಾಲ್ ಹರಿತ್ವಾಲ್, ಸಿಗ್ನಲ್‌ಮ್ಯಾನ್ ವಾಲಾ ಮಹಿಪಾಲ್‌ಸಿನ್ಹ್ ಪ್ರವೀನ್‌ಸಿನ್ಹ್ ಮತ್ತು ರೈಫಲ್‌ಮ್ಯಾನ್ ವಸೀಮ್ ಸರ್ವರ್ ಜೀವತ್ಯಾಗ ಮಾಡಿದ್ದರು.
ಸೆಪ್ಟೆಂಬರ್ 13ರಂದು ಗದೂಲ್ ಅರಣ್ಯದಲ್ಲಿ ಭಯೋತ್ಪಾದಕ ದಾಳಿ:ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಗಡೂಲ್ ಅರಣ್ಯದಲ್ಲಿ ಉಗ್ರಗಾಮಿಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸೇನಾ ಕರ್ನಲ್ ಮತ್ತು ಮೇಜರ್ ಸೇರಿದಂತೆ ಮೂವರು ಅಧಿಕಾರಿಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಡಿವೈಎಸ್‌ಪಿ ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು.
ಸೆಪ್ಟೆಂಬರ್ 19ರಂದು ಭಯೋತ್ಪಾದಕರಿಂದ ನಡೆದ ಗುಂಡಿನ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಉಪ ಅಧೀಕ್ಷಕ ಹುಮಾಯೂನ್ ಮುಜಾಮಿಲ್ ಭಟ್, ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಂಚಕ್, ಸಿಪಾಯಿ ಪ್ರದೀಪ್ ಸಿಂಗ್ ಮತ್ತು ಸಿಪಾಯಿ ಸಲ್ವಿಂದರ್ ಕುಮಾರ್ ಹುತಾತ್ಮರಾಗಿದ್ದರು. ಆರು ದಿನಗಳ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ ಕಮಾಂಡರ್ ಉಝೈರ್ ಬಶೀರ್ ಖಾನ್ ಸೇರಿದಂತೆ ಕನಿಷ್ಠ ಇಬ್ಬರು ಉಗ್ರರು ಹತ್ಯೆ ಮಾಡಲಾಗಿತ್ತು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದರು.
ನವೆಂಬರ್ 22ರಂದು ಗುಲ್ಬಾಗ್ ಅರಣ್ಯದಲ್ಲಿ ದಾಳಿ:ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗುಲ್ಬಾಗ್ ಅರಣ್ಯದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ನಡುವಿನ ನಡೆದಿದ್ದ ಗುಂಡಿನ ದಾಳಿಯಲ್ಲಿ ನಾಲ್ವರು ಸೇನಾ ಸಿಬ್ಬಂದಿ, ಇಬ್ಬರು ಕ್ಯಾಪ್ಟನ್ಗಳು, ಒಬ್ಬ ಹವಾಲ್ದಾರ್ ಮತ್ತು ಲ್ಯಾನ್ಸ್ ನಾಯಕ್ ಹುತಾತ್ಮರಾಗಿದ್ದರು ಹಾಗೂ ಓರ್ವ ಯೋಧ ಗಾಯಗೊಂಡಿದ್ದರು. 63 ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಎಂವಿ ಪ್ರಾಂಜಲ್, ಕ್ಯಾಪ್ಟನ್ ಶುಭಂ ಗುಪ್ತಾ, ಲ್ಯಾನ್ಸ್ ನಾಯಕ್ ಸಂಜಯ್ ಬಿಶ್ತ್ ಮತ್ತು 9 ಪಿಎಆರ್‌ಎಯ ಹವಾಲ್ದಾರ್ ಅಬ್ದುಲ್ ಮಜೀದ್ ಹುತಾತ್ಮರಾಗಿದ್ದರು. ಕ್ಯಾಪ್ಟನ್ ಪ್ರಾಂಜಲ್ ಅವರನ್ನು ರಕ್ಷಿಸುವ ಪ್ರಯತ್ನದಲ್ಲಿ, ವಿಶೇಷ ಪಡೆಯ ಸಿಬ್ಬಂದಿ ಅರಣ್ಯಕ್ಕೆ ತೆರಳಿದ್ದರು. ಆದ್ರೆ, ಉಗ್ರರು ಅವರ ಮೇಲೆ ಭಾರಿ ಗುಂಡಿನ ದಾಳಿ ನಡೆಸಿದ್ದರು.
ಡಿಸೆಂಬರ್ 21ರಂದು ದೇರಾ ಕಿ ಗಲಿದಲ್ಲಿ ಉಗ್ರರ ಅಟ್ಯಾಕ್:ಜಮ್ಮು ಮತ್ತು ಕಾಶ್ಮೀರದ ರಜೌರಿ-ಪೂಂಚ್ ಜಿಲ್ಲೆಗಳ ಗಡಿಯಲ್ಲಿ, ಡೇರಾ ಕಿ ಗಲಿ (ಡಿಕೆಜಿ) ಮೂಲಕ ಚಲಿಸುತ್ತಿದ್ದ ಎರಡು ಸೇನಾ ವಾಹನಗಳ ಮೇಲೆ ಉಗ್ರರು ಹೊಂಚು ಹಾಕಿ ದಾಳಿ ನಡೆಸಿದ್ದರು. ಇದರ ಪರಿಣಾಮ ನಾಲ್ವರು ಸೈನಿಕರು ಪ್ರಾಣ ತ್ಯಾಗ ಮಾಡಿದ್ದರು ಮತ್ತು ಮೂವರು ಗಾಯಗೊಂಡಿದ್ದರು. ಯೋಧರಾದ ಬಿರೇಂದರ್ ಸಿಂಗ್, ಚಂದನ್ ಕುಮಾರ್, ಕರಣ್ ಕುಮಾರ್ ಮತ್ತು ಗೌತಮ್ ಕುಮಾರ್ ಹುತಾತ್ಮರಾಗಿದ್ದರು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದರು. ಪೂಂಚ್ ಜಿಲ್ಲೆಯ ಬಫ್ಲಿಯಾಜ್ ಪ್ರದೇಶದಲ್ಲಿ, ಉಗ್ರರ ದಾಳಿ ನಡೆಸಿದ ಒಂದು ದಿನದ ನಂತರ ಅನುಮಾನಾಸ್ಪದವಾಗಿ ಮೂವರು ನಾಗರಿಕರ ಶವಗಳು ಪತ್ತೆಯಾಗಿದ್ದವು. ಭಾರತೀಯ ಸೇನೆಯು ಈ ವಿಷಯದ ಬಗ್ಗೆ ಆಂತರಿಕ ತನಿಖೆ ಪ್ರಾರಂಭಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದ್ದರು.
ಇದನ್ನೂ ಓದಿ:ಮುಂಬೈ ದಾಳಿಯ ರೂವಾರಿ ಹಫೀಜ್ ಹಸ್ತಾಂತರಿಸಲು ಪಾಕ್ಗೆ ಭಾರತ ಮನವಿ