ಮಹಾರಾಷ್ಟ್ರ: ಇಲ್ಲಿನ ಛತ್ರಪತಿ ಸಂಭಾಜಿ ನಗರದಲ್ಲಿರುವ ಸನ್‌ಶೈನ್ ಎಂಟರ್‌ಪ್ರೈಸಸ್ ಎಂಬ ಕೈಗವಸು ತಯಾರಿಕಾ ಕಾರ್ಖಾನೆಯಲ್ಲಿ ಇಂದು ಬೆಳಿಗ್ಗೆ ಭಾರಿ ಬೆಂಕಿ ಅನಾಹುತ ಸಂಭವಿಸಿದ್ದು, ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ನಾಲ್ವರು ಪ್ರಾಣಾಪಾಯದಿಂದ ಮಂದಿ ಪಾರಾಗಿದ್ದಾರೆ. ವಾಲುಜ್ ಎಂಐಡಿಸಿ ಪ್ರದೇಶದ ಕಾರ್ಖಾನೆಯಲ್ಲಿ 2:15ರ ಸುಮಾರಿಗೆ ಘಟನೆ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ತಲುಪುವಷ್ಟರಲ್ಲಿ ಕಾರ್ಖಾನೆ ಸಂಪೂರ್ಣವಾಗಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿತ್ತು ಎಂದು ತಿಳಿದುಬಂದಿದೆ.
"ಕಾರ್ಮಿಕರ ರಕ್ಷಣೆಗೆ ಅಗ್ನಿಶಾಮಕ ಸಿಬ್ಬಂದಿ ಕಾರ್ಖಾನೆಯೊಳಗೆ ಪ್ರವೇಶಿಸಿದರು. ಆದರೆ ಆರು ಜನರು ಹೊರಬರಲಾರದೆ ಉಸಿರುಗಟ್ಟಿ ಸಾವನ್ನಪ್ಪಿರುವುದು ಗೊತ್ತಾಯಿತು. ಶವಗಳನ್ನು ಹೊರತೆಗೆಯಲಾಗಿದೆ" ಎಂದು ಅಗ್ನಿಶಾಮಕ ಅಧಿಕಾರಿ ಮೋಹನ್ ಮುಂಗ್ಸೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಾಲ್ಕು ಗಂಟೆಗಳ ಸತತ ಕಾರ್ಯಾಚರಣೆಯ ಮೂಲಕ ಬೆಂಕಿ ನಂದಿಸಲಾಗಿದೆ.
ಮೃತದೇಹಗಳನ್ನು ಪೊಲೀಸರು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಘಾಟಿ ಆಸ್ಪತ್ರೆಗೆ ರವಾನಿಸಿದ್ದಾರೆ. ವಾಲೂಜ್ ಎಂಐಡಿಸಿ ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ವಾಲುಜ್ ಇಂಡಸ್ಟ್ರಿಯಲ್ ಪ್ರದೇಶದಲ್ಲಿ C216ರಲ್ಲಿ ಸನ್‌ಶೈನ್ ಎಂಟರ್‌ಪ್ರೈಸಸ್ ಕಾರ್ಖಾನೆ ಇದ್ದು, 20 ರಿಂದ 25 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ರಾತ್ರಿ ಪಾಳಿಯ ಸಮಯದಲ್ಲಿ ಶನಿವಾರ ರಾತ್ರಿ 10ಕ್ಕೆ ಕಾರ್ಮಿಕರು ಮಲಗಿದ್ದರು. ಬಳಿಕ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಮಲಗಿದ್ದ ಕೆಲವರಿಗೆ ತಾಪ ಹೆಚ್ಚಾದ ಅನುಭವವಾಗಿ ಕೂಡಲೇ ಎಚ್ಚರಗೊಂಡಿದ್ದಾರೆ. ಆ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಗಮನಕ್ಕೆ ಬಂದಿದೆ. ತುರ್ತು ನಿರ್ಗಮನ ದ್ವಾರದ ಮೂಲಕ ಪಾರಾಗಲು ಪ್ರಯತ್ನಿಸಿದ್ದು, ಅಲ್ಲಿ ಬೆಂಕಿ ಆವರಿಸಿದ್ದರಿಂದ ಹೊರಬರಲು ಸಾಧ್ಯವಾಗಲಿಲ್ಲ. ಆದರೆ ನಾಲ್ವರು ಕಾರ್ಮಿಕರು ಛಾವಣಿ ಮೂಲಕ ಹೊರಬಂದಿದ್ದಾರೆ. ಉಳಿದ ಆರು ಮಂದಿಗೆ ಹೊರಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.
ಬಿಹಾರ ರಾಜ್ಯದ ಮಿರ್ಜಾಪುರದಲ್ಲಿ ವಾಸಿಸುತ್ತಿದ್ದ ಅಕ್ಬರ್ ಅಲಿ, ಲಟ್ಕೂನ್ ಶೇಖ್, ಅಫ್ರೋಜ್ ಶೇಖ್, ದಿಲೀಪ್ ಕುಮಾರ್ ಬದುಕಿ ಬಂದಿದ್ದಾರೆ. ಮಿರ್ಜಾಪುರದಲ್ಲಿ ವಾಸಿಸುತ್ತಿದ್ದ ಭಲ್ಲಾ ಶೇಖ್, ಕೌಸರ್ ಶೇಖ್, ಇಕ್ಬಾಲ್ ಶೇಖ್, ಮಗರೂಫ್ ಶೇಖ್ ಮತ್ತು ಇನ್ನೂ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಕಾರ್ಮಿಕರೊಬ್ಬರು ತಿಳಿಸಿದರು.
ಸಹಾಯಕ ಪೊಲೀಸ್ ಆಯುಕ್ತ ಅಶೋಕ್ ಥೋರಟ್, ಎಂಐಡಿಸಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು.
ಇದನ್ನೂ ಓದಿ:ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ: ಅಪರಿಚಿತರ ವಿರುದ್ಧ ಎಫ್‌ಐಆರ್