ಸಿಕರ್ (ರಾಜಸ್ಥಾನ):ರಾಜಸ್ಥಾನದ ಸಿಕರ್ ಜಿಲ್ಲೆಯ ಲಕ್ಷ್ಮಣಗಢದ ಬಳಿ ಭಾನುವಾರ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಆರು ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, ಐವರು ಗಾಯಗೊಂಡಿದ್ದಾರೆ.
ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ವಾಹನಗಳಲ್ಲಿ ಸಿಲುಕಿದ್ದ ಶವಗಳನ್ನು ಹೊರತೆಗೆದಿದ್ದಾರೆ. ಭೀಕರ ಅಪಘಾತದಲ್ಲಿ ಎರಡೂ ವಾಹನಗಳು ಜಖಂಗೊಂಡಿವೆ. ಗಾಯಾಳುಗಳನ್ನು ಕಾರುಗಳಿಂದ ಹೊರತೆಗೆದು, ಪ್ರಥಮ ಚಿಕಿತ್ಸೆ ನೀಡಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೊಲೀಸ್ ಮಾಹಿತಿ ಪ್ರಕಾರ, ಸಿಕರ್ ಜಿಲ್ಲೆಯ ಲಕ್ಷ್ಮಣಗಢ ಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಒಂದು ಕಾರು ಸಿಕರ್‌ನಿಂದ ಲಕ್ಷ್ಮಣಗಢ ಕಡೆಗೆ ಬರುತ್ತಿದ್ದರೆ, ಇನ್ನೊಂದು ಲಕ್ಷ್ಮಣಗಢದಿಂದ ಸಿಕರ್ ಕಡೆಗೆ ಹೋಗುತ್ತಿತ್ತು. ಪ್ರತ್ಯಕ್ಷದರ್ಶಿಗಳ ಮಾಹಿತಿಯಂತೆ, ಒಂದು ಕಾರು ಡಿವೈಡರ್ ದಾಟಿಕೊಂಡು ಬಂದು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆ ಬಗ್ಗೆ ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ:ಗ್ರೇಟರ್ ನೋಯ್ಡಾದ ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಮಂಜಿನ ಹಿನ್ನೆಲೆಯಲ್ಲಿ ಟ್ರಕ್ಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದಾರೆ. ಶನಿವಾರ ತಡರಾತ್ರಿ ಅಫಘಾತ ಸಂಭವಿಸಿದೆ. ರಾತ್ರಿ ಅತಿಯಾದ ಮಂಜಿನಿಂದಾಗಿ, ಪಲ್ವಾಲ್‌ನಿಂದ ನೊಯ್ಡಾಕ್ಕೆ ಕ್ಯಾರೇಜ್‌ವೇಯಲ್ಲಿ ಚಲಿಸುವಾಗ ಎಕ್ಸ್‌ಪ್ರೆಸ್‌ವೇಯ ಡಿವೈಡರ್‌ಗೆ ಟ್ರಕ್ ಡಿಕ್ಕಿ ಹೊಡೆದಿದೆ. ಆಗ ಅದರ ಹಿಂದೆ ಬರುತ್ತಿದ್ದ ಇನ್ನೂ ಐದು ಟ್ರಕ್‌ಗಳು ಪರಸ್ಪರ ಅಪಘಾತಕ್ಕೀಡಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಓರ್ವ ಟ್ರಕ್ ಚಾಲಕ ಸಾವನ್ನಪ್ಪಿದ್ದು, ಆತನ ಗುರುತು ಪತ್ತೆಯಾಗಿಲ್ಲ. ಅಪಘಾತದಲ್ಲಿ ರಾಮ್ಲಾವತ್ (60), ಪ್ರವೀಣ್ (25), ಅಶೋಕ್ (40) ಮತ್ತು ಭೂಪೇಂದ್ರ (30) ಎಂಬ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಜಿಮ್ಸ್) ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ಗೆ ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿ