ಅಸ್ಸೋಂ/ಮಿಜೋರಾಂ: ಅತಿಕ್ರಮಣ ವಿಚಾರವಾಗಿ ಅಸ್ಸೋಂ ಮತ್ತು ಮಿಜೋರಾಂ ಗಡಿಯಲ್ಲಿ ಉಂಟಾಗಿರುವ ಕಲ್ಲು ತೂರಾಟ, ಹಿಂಸಾಚಾರದ ವೇಳೆ ಆರು ಮಂದಿ ಅಸ್ಸೋಂ ಪೊಲೀಸರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಈ ಸಂಘರ್ಷ ನಡೆಯುತ್ತಿದ್ದು, ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ದಾಳಿ ಮಾಡಿದ್ದರು. ಇದೇ ವಿಚಾರವಾಗಿ ಮಿಜೋರಾಂ ಹಾಗೂ ಅಸ್ಸೋಂ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತುಕತೆ ನಡೆಸಿ ವಿವಾದ ಬಗೆಹರಿಸುವಂತೆ ಸೂಚಿಸಿದ್ದರು.
ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ಮುಖ್ಯಮಂತ್ರಿ ಜೊರಾಮ್ತಂಗ ಕೆಲವೊಂದು ವಿಡಿಯೋ ತುಣುಕುಗಳನ್ನು ಗೃಹ ಸಚಿವರ ಟ್ವಿಟರ್ ಅಕೌಂಟ್ಗೆ ಟ್ಯಾಗ್ ಮಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಇಂದು ಹಿಂಸಾಚಾರ ನಡೆದಿದ್ದು, ಆರು ಮಂದಿ ಪೊಲೀಸರು ಸಾವಿಗೀಡಾಗಿದ್ದಾರೆ.