ಹೈದರಾಬಾದ್:ಪ್ರತ್ಯೇಕವಾಗಿ ಆರು ಜನ ಮೃತಪಟ್ಟ ಘಟನೆ ಹೈದರಾಬಾದ್ ನಗರದಲ್ಲಿ ಇಂದು ಬೆಳಕಿಗೆ ಬಂದಿದೆ. ಬೋಯಿನಪಲ್ಲಿಯಲ್ಲಿ ನಸುಕಿನ ವೇಳೆ ವ್ಯಕ್ತಿಯೊಬ್ಬ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮತ್ತೊಂದು ಪ್ರಕರಣದಲ್ಲಿ, ಬೋರಬಂಡಾ ಎಂಬಲ್ಲಿ ಮಹಿಳೆ ತನ್ನ ಇಬ್ಬರು ಗಂಡು ಮಕ್ಕಳನ್ನು ಕೊಂದು ತಾನೂ ಸಾವಿನ ಕದ ತಟ್ಟಿದ್ದಾರೆ.
ಘಟನೆ-1: ಕೌಟುಂಬಿಕ ಕಲಹದಿಂದ ಸಿಕಂದರಾಬಾದ್ನ ಬೋಯಿನಪಲ್ಲಿಯ ಭವಾನಿನಗರ ಕಾಲೋನಿಯ ಶ್ರೀಕಾಂತ್ ಚಾರಿ (42) ಎಂಬಾತ 8 ಹಾಗೂ 7 ವರ್ಷದ ಇಬ್ಬರು ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ರಾತ್ರಿ ಕುಟುಂಬದವರೆಲ್ಲ ಸೇರಿ ಊಟ ಮಾಡಿ ಒಟ್ಟಿಗೆ ಮಲಗಿದ್ದರು. ಬೆಳಗ್ಗೆದ್ದು ನೋಡಿದಾಗ ಮಕ್ಕಳೊಂದಿಗೆ ಶ್ರೀಕಾಂತ್ ಶವವಾಗಿದ್ದರು.
"ಎಂದಿನಂತೆ ನಾವು ಮೇಲೆ ಹೋಗಿ ಮಲಗಿದೆವು, ನಂತರ ಏನಾಯಿತು ಎಂದು ನನಗೆ ತಿಳಿದಿಲ್ಲ. ಬೆಳಗ್ಗೆದ್ದಾಗ ನನ್ನ ಗಂಡ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹಿರಿಯ ಮಗುವಿನ ಮೃತದೇಹ ವಾಶ್ ರೂಂನಲ್ಲಿತ್ತು. ಕಿರಿಯ ಮಗುವಿನ ಮೃತದೇಹ ಮತ್ತು ಪತಿಯ ಮೃತದೇಹ ಕೋಣೆಯಲ್ಲಿತ್ತು. ಎಚ್ಚರಿಸಲು ಪ್ರಯತ್ನಪಟ್ಟೆ. ಆದರೆ, ಅವರಾರೂ ಏಳಲಿಲ್ಲ. ಭಯದಿಂದ ನಾನೇ ಮನೆಯವರನ್ನು ಕರೆದು ತಿಳಿಸಿದೆ" ಎಂದು ಪತ್ನಿ ಅಕ್ಷಯಾ ಹೇಳಿದರು.