ಪುಣೆ(ಮಹಾರಾಷ್ಟ್ರ):ಮೇಣದಬತ್ತಿ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಟ ಆರು ಜನರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ನಡೆಯಿತು. ಇತರ ಎಂಟು ಮಂದಿ ಗಾಯಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಿಂಪ್ರಿ-ಚಿಂಚ್ವಾಡ್ ಪ್ರದೇಶದ ತಾಳವಾಡೆಯಲ್ಲಿ ಈ ಕಾರ್ಖಾನೆ ಇದೆ. ಸಾಮಾನ್ಯವಾಗಿ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ಬಳಸಲ್ಪಡುವ ಮಿಂಚುವ ಮೇಣದಬತ್ತಿಗಳನ್ನು ಇಲ್ಲಿ ತಯಾರಿಸಲಾಗುತ್ತಿದೆ. ಇಂದು ಮಧ್ಯಾಹ್ನ 2.45ರ ಸುಮಾರಿಗೆ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ಬಂದಿದೆ. ಅಂತೆಯೇ, ಅಗ್ನಿಶಾಮಕ ವಾಹನಸಮೇತ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು ಎಂದು ಪಿಂಪ್ರಿ-ಚಿಂಚ್ವಾಡ್ ಪುರಸಭೆ ಆಯುಕ್ತ ಶೇಖರ್ ಸಿಂಗ್ ಮಾಹಿತಿ ನೀಡಿದರು.
ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಗಾಯಾಳುಗಳನ್ನು ಪುಣೆ ಹಾಗೂ ಪಿಂಪ್ರಿ-ಚಿಂಚ್ವಾಡ್ ಪ್ರದೇಶದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಮತ್ತೊಂದೆಡೆ, ಘಟನೆ ಬಳಿಕ ಏಳರಿಂದ ಎಂಟು ಆಂಬ್ಯುಲೆನ್ಸ್‌ಗಳು ಸಹ ಸ್ಥಳಕ್ಕೆ ತಲುಪಿದ್ದವು. ಒಟ್ಟು ಆರು ಮಂದಿಯ ಮೃತದೇಹಗಳು ಪತ್ತೆಯಾಗಿವೆ. ಗಾಯಾಳುಗಳ ಪೈಕಿ ಏಳು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದ್ದಾರೆ. ಇದೇ ವೇಳೆ, ಯಾವುದೇ ಅನುಮತಿ ಇಲ್ಲದೇ ಕಾರ್ಖಾನೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಈ ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.