ಸಿವಾನ್: ಬಿಹಾರದಲ್ಲಿ ಮತ್ತೆ ನಕಲಿ ಮದ್ಯದ ದುರಂತ ಸದ್ದು ಮಾಡಿದೆ. ಸಿವಾನ್ ಜಿಲ್ಲೆಯ ಲಕ್ಡಿ ನಾವಿಗಂಜ್ ಬ್ಲಾಕ್‌ನ ಬಾಲಾ ಗ್ರಾಮದಲ್ಲಿ ನಕಲಿ ಮದ್ಯ ಸೇವಿಸಿ ಇದುವರೆಗೆ ಐವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಲಾಗ್ತಿದೆ. ಆದರೆ, ಜಿಲ್ಲಾಡಳಿತದ ಅಂಕಿ ಅಂಶಗಳ ಪ್ರಕಾರ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಗ್ರಾಮಸ್ಥರ ಪ್ರಕಾರ, ನಕಲಿ ಮದ್ಯ ಸೇವಿಸಿದ ಪ್ರಕರಣದಲ್ಲಿ ನರೇಶ್ ರಾವುತ್ ಎಂಬಾತ ಮೊದಲಿಗೆ ಮೃತಪಟ್ಟಿದ್ದ. ಗ್ರಾಮದಲ್ಲಿಯೇ ಆತನ ಶವಸಂಸ್ಕಾರ ಮಾಡಲಾಗಿತ್ತು.
ಈತನ ಅಂತ್ಯಸಂಸ್ಕಾರ ನಡೆದ ಕೆಲ ಹೊತ್ತಿನಲ್ಲಿಯೇ ಗ್ರಾಮದ ಇನ್ನು ಕೆಲವರ ಆರೋಗ್ಯ ಹದಗೆಟ್ಟಾಗ ಜನರಲ್ಲಿ ಆತಂಕ ಶುರುವಾಗಿತ್ತು. ಅನಾರೋಗ್ಯಕ್ಕೀಡಾದ ಎಲ್ಲ ಅಸ್ವಸ್ಥರನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಸ್ವಸ್ಥನಾಗಿದ್ದ ಜನಕದೇವ್ ಎಂಬಾತ ಆಸ್ಪತ್ರೆ ತಲುಪುವ ಮುನ್ನವೇ ಸಾವನ್ನಪ್ಪಿದ್ದಾನೆ. ನಕಲಿ ಮದ್ಯ ತಯಾರಿಕೆಯ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಜಿಲ್ಲಾಡಳಿತ ದಾಳಿ ನಡೆಸುತ್ತಿದೆ. ಇದೇ ವೇಳೆ ಅಸ್ವಸ್ಥರನ್ನು ಗುರುತಿಸಿ ಆಸ್ಪತ್ರೆಗೆ ಕರೆತರುವ ಕಾರ್ಯವೂ ನಡೆಯುತ್ತಿದೆ.
ನಕಲಿ ಮದ್ಯ ಸೇವನೆ ಪ್ರಕರಣ ಮುಚ್ಚಿಹಾಕಲು ಯತ್ನಿಸಿತಾ ಜಿಲ್ಲಾಡಳಿತ?:ಬಾಲಾ ಗ್ರಾಮದಿಂದ ಚಿಂತಾಜನಕ ಸ್ಥಿತಿಯಲ್ಲಿ ಪಟ್ಟಣದ ಆಸ್ಪತ್ರೆಗೆ ಕರೆತರಲಾದ ಧುರೇಂದ್ರ ಮಾಂಝಿ ಎಂಬಾತ ತಾನು ನಕಲಿ ಮದ್ಯ ಸೇವಿಸಿದ್ದನ್ನು ಕ್ಯಾಮರಾಗಳ ಮುಂದೆ ಹೇಳಿದ್ದಾನೆ. ಆದರೆ ಇಷ್ಟರಲ್ಲೇ ಆತನ ಆರೋಗ್ಯ ಹದಗೆಡಲು ಪ್ರಾರಂಭಿಸಿತು. ಆತ ಇನ್ನೇನೋ ಹೇಳುವಷ್ಟರಲ್ಲಿ ಜಿಲ್ಲಾಡಳಿತದ ಅಧಿಕಾರಿ ಆತನನ್ನು ತಡೆದರು. ಅಷ್ಟೇ ಅಲ್ಲದೆ ಮಾಧ್ಯಮದವರ ಕ್ಯಾಮರಾಗಳನ್ನು ಕೂಡ ಸ್ವಿಚ್ ಆಫ್ ಮಾಡಿಸಿದರು ಎಂದು ತಿಳಿದುಬಂದಿದೆ. ಸದ್ಯ ಮೃತರನ್ನು 1. ನರೇಶ್ ರಾವುತ್, 2. ಜನಕ್ ಪ್ರಸಾದ್, 3. ರಮೇಶ್ ರಾವತ್ ಮತ್ತು 4. ಸುರೇಂದ್ರ ಮಾಂಝಿ ಎಂದು ಗುರುತಿಸಲಾಗಿದೆ.