ಮುಂಬೈ:ಮಾಜಿ ಪೊಲೀಸ್ ಆಯುಕ್ತ ಪರಮ್‌ಬೀರ್ ಸಿಂಗ್ ಮತ್ತು ಇತರ 7 ಜನರ ವಿರುದ್ಧ ದಾಖಲಾಗಿರುವ ಸುಲಿಗೆ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ ಎಂದು ಮುಂಬೈನ ಅಪರಾಧ ವಿಭಾಗದ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗ್ರಾಲೆ ಅವರು ಜುಲೈ 25 ರಂದು ಎಸ್‌ಐಟಿ ರಚನೆಗೆ ಆದೇಶಿಸಿದ್ದಾರೆ ಎಂದು ಅವರು ಹೇಳಿದರು. ಬಿಲ್ಡರ್‌ವೊಬ್ಬರು ನೀಡಿದ ದೂರಿನ ಅನ್ವಯ, ಪರಮ್ ಬೀರ್‌ಸಿಂಗ್, ಐವರು ಪೊಲೀಸ್ ಸಿಬ್ಬಂದಿ ಮತ್ತು ಇತರ ಇಬ್ಬರ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಮ್ ಆಕ್ಟ್ (ಎಂಸಿಒಸಿಎ) ಮತ್ತು ನಾರ್ಕೋಟಿಕ್ ಡ್ರಗ್ಸ್ ಮತ್ತು ಇತರೆ ಕಾಯ್ದೆಗಳಡಿ ತನ್ನ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯಲು ಪರಮ್‌ಬೀರ್ ಸಿಂಗ್ ಮತ್ತಿತರ ಆರು ಮಂದಿ ₹15 ಕೋಟಿಗೆ ಬೇಡಿಕೆ ಇಟ್ಟಿದ್ದರು ಎಂದು ಬಿಲ್ಡರ್ ದೂರಿನಲ್ಲಿ ಆರೋಪಿಸಿದ್ದರು. ಈ ಪ್ರಕರಣದಲ್ಲಿ, ಸುನೀಲ್ ಜೈನ್ ಮತ್ತು ಸಂಜಯ್ ಪುನಾಮಿಯಾ ಎಂಬ ಇಬ್ಬರು ಪಾಲುದಾರ ಬಿಲ್ಡರ್‌ಗಳನ್ನು ಬಂಧಿಸಲಾಗಿತ್ತು.
ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕಗಳು ತುಂಬಿದ ವಾಹನ ಪತ್ತೆ ಪ್ರಕರಣದಲ್ಲಿ ಪರಮ್ ಬೀರ್‌ಸಿಂಗ್ ಅವರನ್ನು ಮುಂಬೈ ಪೊಲೀಸ್ ಆಯುಕ್ತ ಹುದ್ದೆಯಿಂದ ವರ್ಗಾವಣೆ ಮಾಡಲಾಗಿತ್ತು.