ಫಿರೋಜಾಬಾದ್:ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ನಾಲ್ವರು ಸಹೋದರಿಯರು ಸೇರಿದಂತೆ 7 ಮಂದಿ ಹಲ್ಲೆ ಮಾಡಿ, ಬಳಿಕ ಬೆಂಕಿ ಹಚ್ಚಿ ಸುಟ್ಟು ಹಾಕಿದ ಭೀಕರ ಘಟನೆ ಉತ್ತಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಸಹೋದರಿಯರನ್ನು ಬಂಧಿಸಲಾಗಿದೆ.
ಮಂಗಳವಾರ ಬೆಳಗ್ಗೆ ಶವವನ್ನು ನೆರೆಹೊರೆಯವರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ವಿಷಯ ಬೆಳಕಿಗೆ ಬಂದಿದೆ. 7 ಜನರ ಗುಂಪು ವ್ಯಕ್ತಿಯ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಲ್ವರು ಸಹೋದರಿಯರು ಮೂವರು ಪುರುಷರು ವ್ಯಕ್ತಿಯನ್ನು ದೊಣ್ಣೆಯಿಂದ ಥಳಿಸುತ್ತಿರುವುದು ವಿಡಿಯೋದಲ್ಲಿದೆ. ಹಲ್ಲೆ ಬಳಿಕ ಮಂಚದ ಮೇಲೆ ಆತನನ್ನು ಮಲಗಿಸಿ ಅದಕ್ಕೆ ಬೆಂಕಿ ಹಚ್ಚಲಾಗಿದೆ.
ಕಾರಣವೇನು?:ವಿಷಯ ತಿಳಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಶವ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತನಿಖೆ ನಡೆಸಿದ ವೇಳೆ ಮೃತ ವ್ಯಕ್ತಿ ಸಹೋದರಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬುದು ತಿಳಿದು ಬಂದಿದೆ. ಇದರಿಂದ ಬೇಸತ್ತಿದ್ದ ಸಹೋದರಿಯರು ಹಲವು ಬಾರಿ ಈತನ ಜೊತೆ ಕಿತ್ತಾಡಿದ್ದರು.
ಸೋಮವಾರ ರಾತ್ರಿಯ ವೇಳೆ ಸಹೋದರಿಯರ ಮನೆಯ ಮುಂದೆ ಮೃತ ವ್ಯಕ್ತಿ ಮಂಚವನ್ನು ಹಾಕಿಕೊಂಡು ಮಲಗಿದಾಗ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ, ನಾಲ್ವರು ಸಹೋದರಿಯರು ಆತನ ಮೇಲೆ ದೊಣ್ಣೆಗಳಿಂದ ದಾಳಿ ಮಾಡಿದ್ದಾರೆ. ಮೂವರು ಪುರುಷರು ಕೂಡ ಹಲ್ಲೆ ನಡೆಸಿ ಕೊಂದು ಹಾಕಿದ್ದಾರೆ. ಸದ್ಯ ನಾಲ್ವರು ಸಹೋದರಿಯರನ್ನು ಬಂಧಿಸಿರುವ ಪೊಲೀಸರು, ಇನ್ನೂ ಮೂವರು ಆರೋಪಿಗಳ ಪತ್ತೆ ನಡೆಸುತ್ತಿದೆ.
ಓದಿ:ಗನ್ ಹಿಡಿದು ದರೋಡೆಗೆ ಯತ್ನಿಸಿದ ದುಷ್ಕರ್ಮಿಗಳು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ